ಪ್ರಪಂಚದ ಮೊಟ್ಟ ಮೊದಲ ಸಂಸತ್ತು ನಡೆದ ಸ್ಥಳ ಬಸವ ಕಲ್ಯಾಣದ ಅನುಭವ ಮಂಟಪವನ್ನು ಕಣ್ತುಂಬಿಕೊಳ್ಳಬನ್ನಿ.

ಪ್ರಪಂಚದ ಮೊಟ್ಟ ಮೊದಲ ಸಂಸತ್ತು ನಡೆದ ಸ್ಥಳ, ಪ್ರಜಾತಂತ್ರದ ಕನಸಿನ ಜನ್ಮಸ್ಥಳ, ಸಾಮಾಜಿಕ ಕ್ರಾಂತಿಯ ಬೀಡು ಬಸವ ಕಲ್ಯಾಣದ ಅನುಭವ ಮಂಟಪವನ್ನು ಕಣ್ತುಂಬಿಕೊಳ್ಳಬನ್ನಿ. ಕನ್ನಡಿಗರ ಹೆಮ್ಮೆಯ ಈ ಸಾಕ್ಷಿಗಳಿಗೆ ನೀವೂ ಸಾಕ್ಷಿಯಾಗಿ. ನಿಮ್ಮ ಸ್ನೇಹಿತರೊಂದಿಗೆ ಹಂಚಿ ಹಾಗು ಕಾಮೆಂಟ್ ಮಾಡಿ.
ಸ್ಥಳದ ಕುರಿತು ಕಿರು ಪರಿಚಯ: ಹನ್ನೆರಡನೇ ಶತಮಾನ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಪ್ರಪಂಚವೇ ಬದಲಾವಣೆಯ ಗಾಳಿಗೆ ತೆರೆದುಕೊಂಡ ಸಮಯ. ಅದಕ್ಕೆ ಕಾರಣ ಕರ್ನಾಟಕದಲ್ಲುಂಟಾದ ಸಾಮಾಜಿಕ ಬದಲಾವಣೆಯ ಕ್ರಾಂತಿ. ಸಂಪ್ರದಾಯವಾದವನ್ನು ಸಲಹುತ್ತಾ ದೀನ-ದಲಿತರಿಗೆ ದುಸ್ವಪ್ನವಾಗಿದ್ದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಸಮಾನ ಮನಸ್ಕ ಶರಣರೆಲ್ಲರೂ ಕೂಡಿ ಕಟ್ಟಿದ ಶರಣರ ಈ ಮಹಾಮನೆಯೆ ಅನುಭವ ಮಂಟಪ. ಜಾತಿ, ಧರ್ಮ, ಲಿಂಗಭೇದಗಳನ್ನ ಗಾಳಿಗೆ ತೂರಿ ಸಮಾಜದ ವಿವಿಧ ಸ್ತರದ ಜನಗಳು ಒಟ್ಟಿಗೆ ಬಂದು ಚರ್ಚಿಸಿ ಅನೇಕ ಸಾಮಾಜಿಕ ಪಿಡುಗುಗಳಿಗೆ, ನಿಬಂಧನೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಜಗತ್ತಿನ ಮೊಟ್ಟ ಮೊದಲ ಸಂಸತ್ತು ಕನ್ನಡಿಗರ ಹೆಮ್ಮೆಯ ಅನುಭವ ಮಂಟಪ. ಇಂದು ಬಸವ ಕಲ್ಯಾಣದಲ್ಲಿ ಆ ಅನುಭವ ಮಂಟಪವನ್ನು ನೆನಪಿಸುವ ರೀತಿಯಲ್ಲಿ ನವೀನ ಮಾದರಿಯ ಅನುಭವ ಮಂಟಪ ತಲೆಯೆತ್ತಿದೆ. ಬಸವ ಕಲ್ಯಾಣ ಪಟ್ಟಣದಿಂದ ೩-೪ ಕಿಮೀ ದೂರವಿರುವ ಈ ಅನುಭವ ಮಂಟಪದ ಸಮೀಪದಲ್ಲೇ ಬಸವಣ್ಣ ನವರ ೧೦೮ ಅಡಿ ಎತ್ತರದ ಪ್ರತಿಮೆಯೂ ಇದೆ. ಬಸವಾದಿ ಪ್ರಮಥರು ಓಡಾಡಿ ಸಾಮಾಜಿಕ ಬದಲಾವಣೆಗೆ ಕಂಕಣ ಕಟ್ಟಿದ ಈ ಸ್ಥಳವನ್ನ ಕನ್ನಡಿಗರೆಲ್ಲರೂ ನೋಡಲೇ ಬೇಕು. ಪ್ರಜಾತಂತ್ರಕ್ಕೆ ಈ ಸ್ಥಳ ನಾಂದಿ ಹಾಡಿದ ಕಾರಣ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿರುವ ದೇಶದವರೆಲ್ಲರೂ ಈ ಸ್ಥಳವನ್ನು ನೋಡಬೇಕು ಎಂದರೂ ಅತಿಶಯೋಕ್ತಿಯಲ್ಲ.

Post a Comment

Previous Post Next Post