ಹಿರಿಯ ವಿದ್ವಾಂಸರು ಹಾಗೂ ಹಸ್ತಪ್ರತಿ ತಜ್ಞರಾದ ಪ್ರೊ. ಬಿ.ಎಸ್.ಸಣ್ಣಯ್ಯ ನಿಧನ

ಶ್ರವಣಬೆಳಗೊಳ:   ಹಿರಿಯ ವಿದ್ವಾಂಸರು ಹಾಗೂ ಹಸ್ತಪ್ರತಿ ತಜ್ಞರಾದ ಮೈಸೂರಿನ ಪ್ರೊ. ಬಿ.ಎಸ್.ಸಣ್ಣಯ್ಯನವರು (94 ವರ್ಷ) ಬುಧವಾರ ಸಂಜೆ ನಿಧನರಾಗಿದ್ದಾರೆ.
       ಮೃತರು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಹಸ್ತಪ್ರತಿ ವಿಭಾಗದ ಮುಖ್ಯಸ್ಥರು ಹಾಗೂ ನಿರ್ದೇಶಕರಾಗಿದ್ದು, ಪ್ರಾಕೃತ ಭಾಷಾ ತಜ್ಞರಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು.
     ಪ್ರೊ. ಬಿ.ಎಸ್.ಸಣ್ಣಯ್ಯರವರ ನಿಧನಕ್ಕೆ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಂತಾಪ ಸೂಚಿಸಿ, ಶ್ರೀಯುತರು 60 ಕ್ಕೂ ಹೆಚ್ಚು ಕೃತಿಗಳನ್ನು ಸಂಶೋಧನೆ ಮಾಡಿ, ಜೈನ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ನಂತರ ಪ್ರಾಕೃತ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಹಸ್ತಪ್ರತಿಗಳ ಸೂಚಿ ತಯಾರಿಸಿ, ಅಪ್ರಕಟಿತ ಗ್ರಂಥಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾಗಿದ್ದರು. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಹಾಗೂ ಪ್ರಕಟಣೆಯಲ್ಲಿ ಶ್ರಮಿಸಿ ಸರಸ್ವತಿ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 
      ಶ್ರೀಯುತರ ನಿಧನದಿಂದ ಹಸ್ತಪ್ರತಿ, ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಿ, ಮೋಕ್ಷ ಪ್ರಾಪ್ತಿಯಾಗಲಿ. ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

Previous Post Next Post