ಬೇಲೂರು:ಕೋವಿಡ್ ಸೋಂಕಿತರ ನಿರ್ವಾಹಣೆ ಹಾಗೂ ಚಿಕಿತ್ಸಾ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎನ್ನುವ ಅಧಿಕಾರಿಗಳ ಹೇಳಿಕೆಯ ನಡುವೆಯೂ ಅವ್ಯವಸ್ಥೆಯ ಕೂಗು ಕೇಳಿಬರುತ್ತಿದೆ.ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಸರ್ಕಾರಿ ಹಾಸ್ಟೆಲ್‍ನಲ್ಲಿ ಆರಂಭಿಸಿರುವ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿನ ಸೋಂಕಿತರು ಯಾತನೆ ಅನುಭವಿಸುತ್ತಿದ್ದಾರೆ. ಕೇಂದ್ರದ ಕೊಠಡಿಯಲ್ಲಿ ಜಿರಲೆ,ಇರುವೆ, ಕ್ರಮಿಕೀಟಗಳದ್ದೇ ಕಾರುಬಾರು ಆಗಿದೆ.ಶುಚಿತ್ವದಲ್ಲಂತೂ ಕೇಳದ ಸ್ಥಿತಿ ಉಂಟಾಗಿದೆ.
ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಶಕ್ತಿ ಬ್ಲಾಕ್ಸ ಸೋಸೈಟಿ ತಾಲ್ಲೂಕು ಉಪಾಧ್ಯಕ್ಷರು, ಹೆಬ್ಬಾಳು ಗ್ರಾ.ಪಂ.ಮಾಜಿ ಅಧ್ಯಕ್ಷೆ ಹಾಗೂ ಸಮಾಜಸೇವಕಿ ಹೆಚ್.ಬಿ.ರತಿದೇವಿ ಅವರು ಹೇಳಿದ್ದು ಹೀಗೆ, ಕೇಂದ್ರಕ್ಕೆ ಕರೆತಂದ ನಂತರ ಕೊಠಡಿಯೊಂದಕ್ಕೆ ಕಳುಹಿಸಿದರು. ಕೊಠಡಿಗೆ ನಾವು ಹೋದಾಗ ಬಳಕೆ ಮಾಡಿದ ಹ್ಯಾಂಡ್ ಗ್ಲೌಸ್, ಪಿಪಿ ಕಿಟ್‍ಗಳ ಬಿದ್ದಿದ್ದವು.
ಆ ಕೊಠಡಿಯ ತುಂಬೆಲ್ಲಾ ಇರುವೆ, ಜಿರಲೆಯದೆ ಸಾಮ್ರಾಜ್ಯವಾಗಿದೆ.ಕೊಠಡಿಯನ್ನು ನಾವೇ ಗುಡಿಸಿಕೊಳ್ಳಬೇಕಾಗಿದೆ. ಶೌಚಾಲಯ ಶುಚಿಯಿಲ್ಲ. ಸೊಳ್ಳೆಕಾಟ ಹೆಚ್ಚಿದ್ದರಿಂದ ಸೊಳ್ಳೆ ಬತ್ತಿತಂದುಕೊಡುವಂತೆ ಕೇಳಿದರೆ, ದುಡ್ಡುಕೊಟ್ಟರೆ ತಂದುಕೊಡುತ್ತೇವೆಂದು ನೌಕರರು ತಿಳಿಸಿದರು.
ಅವ್ಯವಸ್ಥೆ ಕುರಿತು ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ವಿಜಯ್ ಅವರ ಗಮನಕ್ಕೆ ತಂದಾಗ, ಸ್ವಚ್ಛತೆಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ವಿಷಯವನ್ನು ಸ್ನೇಹಿತೆಯೊಬ್ಬರ ಗಮನಕ್ಕೂ ತಂದಿದ್ದೇನೆ. ನಾನೇ ಕೊಠಡಿ ಗುಡಿಸಿಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಮನೆಯಲ್ಲಿ ಬಿಸಿನೀರು ಉಪಯೋಗಿಸಬೇಕೆಂದು ತಿಳಿಸುತ್ತಾರೆ. ಆದರೆ ಇಲ್ಲಿ ಬಿಸಿನೀರು ಇಲ್ಲ. ಮೊರಾಜಿ ಶಾಲೆಯಲ್ಲಿ ಮಾಡಿದ ಊಟವನ್ನು ಪ್ಯಾಕೇಟ್ ಮಾಡಿ ತಂದುಕೊಡುತ್ತಾರೆ. ಈ ಪ್ಯಾಕೇಟ್ ನಾವೇ ಹೊರಗಡೆಗೆ ಹೋಗಿ ಪಡೆದುಕೊಳ್ಳಬೇಕು.ತಪಾಸಣೆಗೆ ಬರುವ ಅಧಿಕಾರಿಗಳು ಹೊರಗಡೆಗೆ ನಮ್ಮನ್ನು ಕರೆಸಿಕೊಂಡು ವಿಚಾರಿಸುತ್ತಾರೆ. ಒಟ್ಟಾರೆ, ಕೊಠಡಿಯೊಳಕ್ಕೆ ಬರಲು ಹಿಂಜರಿಯುತ್ತಾರೆ. ಹಣ್ಣೊಂದನ್ನು ಉತ್ತಮ ರೀತಿಯಲ್ಲಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

