ಹೇಮಾವತಿ ನಾಲೆಗೆ ಭಾರಿ ಮಣ್ಣು ಕುಸಿತ

ಬಾಗೂರು: ಹೋಬಳಿಯ ದ್ಯಾವೇನಹಳ್ಳಿ ಗ್ರಾಮದ ಹೇಮಾವತಿ ನಾಲೆಯ ಪಂಪ್ಹೌಸ್ ಸಮೀಪ ಎರಡು ದಿನಗಳ ಹಿಂದೆ ಸುಮಾರು 80 ಅಡಿ ಎತ್ತರದಿಂದ ನಾಲೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.


ಶನಿವಾರ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ ಗುಂಡಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಅವರು, ‘ಸುರಂಗ ಮಾರ್ಗದ ಪಕ್ಕದಲ್ಲೇ ಭಾರಿ ಪ್ರಮಾಣದಲ್ಲಿ ಮಣ್ಣು ಕಲ್ಲು ಕುಸಿದು ಬಿದ್ದಿದ್ದು ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಇನ್ನೂ ಹೇಮಾವತಿ ಜಲಾಶಯ ಭಾಗದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಡ್ಯಾಂನಿಂದ ನೀರು ಬಿಡುವ ಸಂಭವವಿದ್ದು ಆದ್ದರಿಂದ ಅತೀ ಬೇಗ ತೆರವುಗೊಳಿಸುವ ಕೆಲಸವಾಗಬೇಕಾಗಿದೆ. ಈ ದೊಡ್ಡ ನಾಲೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಯುವುದರಿಂದ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲು ತೆರವುಗೊಳಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಬಾಗೂರು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ಜಿ ಪುನೀತ್, ಕಿರಿಯ ಎಂಜಿನಿಯರ್ ಎಲ್.ಎನ್ ವಿಜಯ್ ಇದ್ದರು.
ತಪ್ಪಿದ ಭಾರಿ ಅನಾಹುತ: ದಿನನಿತ್ಯ ಅನೇಕ ಜನರು ಸುರಂಗ ಮಾರ್ಗ ನೋಡಲು ವಿವಿಧೆಡೆಯಿಂದ ಜನರು ಬರುತ್ತಾರೆ. ಇಲ್ಲಿ ನಿಂತಿರುವ ನೀರಿನಲ್ಲಿ ಮೀನು ಹಿಡಿಯಲೂ ಹಳ್ಳಿಗಳಿಂದ ಜನರು ಬರುತ್ತಾರೆ. ಆದರೆ, ಕಳೆದ ಎರಡು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಮಣ್ಣು ಕುಸಿದಿದ್ದರಿಂದ ಅನಾಹುತ ತಪ್ಪಿದೆ ಎಂದು ತಿಳಿಸಿದರು

Post a Comment

Previous Post Next Post