ಬೇಲೂರು: ಪಟ್ಟಣದ ಕೆಂಪೇಗೌಡ ವೃತ್ತ ಸಮೀಪದ ಮನೆಯೊಳಗೆ ನಿಲ್ಲಿಸಿದ್ದ ಬೈಕ್‌ನ್ನು ಖದೀಮರು ಹೊತ್ತೊಯ್ದಿದ್ದು ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಖಲಂದರ್ ಎಂಬುವರು ಸ್ಟಾರ್ ಸಿಟಿ ಬೈಕನ್ನು ತಮ್ಮ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದರು. ಇದನ್ನು ಗಮನಿಸಿದ ನಾಲ್ವರು ಖದೀಮರು ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಬೈಕ್ ಕಳ್ಳತನ ಮಾಡಿದ್ದಾರೆ. ಭುವನೇಶ್ವರಿ ರಕ್ತ ಪರೀಕ್ಷಾ ಕೇಂದ್ರದ ಸಿಸಿ ಟಿವಿಯಲ್ಲಿ ಖದೀಮರು ಬೈಕ್ ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಎಲ್ಲಾಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ಮುಖ್ಯ ರಸ್ತೆಯಾಗಿರುವ ಕೆಂಪೇಗೌಡ ವೃತ್ತದಲ್ಲಿ ಸಿಸಿಟಿವಿ ಅಳವಡಿಸಿಲ್ಲದ ಕಾರಣ ಬೈಕ್ ಕಳ್ಳತನ ಆಗಿದೆ. ಮೂಡಿಗೆರೆ, ಸಕಲೇಶಪುರ ಹಾಗೂ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಸಿಸಿ ಟಿವಿ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.