ಅನಂತರಾಜೇಅರಸು ಬೇಲೂರು:
ಸರ್ಕಾರದ ಅಲ್ಪ ಪ್ರಮಾಣದ ನೆರವು, ಅಧಿಕಾರಿಗಳು ಹಾಗೂ ಗ್ರಾಮಸಹಾಯಕರ ಒತ್ತಾಸೆ, ಧಾನಿಗಳ ಸಹಾಯ ಇವುಗಳಿಂದ ತಾಲ್ಲೂಕಿನ ಬಿಕ್ಕೋಡು ಗ್ರಾಮದ ಉಪತಹಸೀಲ್ದಾರ್ ಹಾಗೂ ರಾಜಸ್ವನಿರೀಕ್ಷಕರ ಕಟ್ಟಡವಿಂದು ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿದೆ.
ಹಳೆಯದಾದ ಕಟ್ಟಡ. ತಳಪಾಯ ಮತ್ತು ಬಿರುಕುಬಿಟ್ಟಗೋಡೆ ಹೊರತುಪಡಿಸಿ ಉಳಿದೆಲ್ಲವೂ ಪೂರ್ಣ ಪ್ರಮಾಣದಲ್ಲಿ ಹಾಳಾಗಿತ್ತು. ಮೇಲ್ಚಾವಣಿ ಪೂರ್ಣ ಹಾನಿಗೊಳಗಾಗಿದ್ದರಿಂದ ಮಳೆಯಗಾಲದಲ್ಲಿ ಟಾರ್ಪಾಲ್ ಹಾಕಿಕೊಂಡು, ಛತ್ರಿ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಾದ ಹೀನಾಯ ಸ್ಥಿತಿಯಿತ್ತು. ಮಳೆಯ ನೀರಿನಿಂದ ಕೆಲವೊಂದು ದಾಖಲೆಗಳು ಹಾನಿಗೊಳಗಾಗಿದ್ದವು.
ಇದೀಗ ನಾಡಕಚೇರಿಯ ಉಪತಹಸೀಲ್ದಾರ್ ಪ್ರದೀಪ್, ರಾಜಸ್ವನಿರೀಕ್ಷಕ ಅಸ್ಲಂಪಾಷ ಹಾಗೂ ಈ ಭಾಗದ ಗ್ರಾಮಸಹಾಯಕರು ಸೇರಿ ಚರ್ಚಿಸಿದರು. ಕಟ್ಟಡ ಜೀರ್ಣೋದ್ಧಾರಕ್ಕೆ ಚಿಂತನೆ ನಡೆಸಿದರು. ಸರ್ಕಾರದಿಂದ ಮಳೆಹಾನಿ ಪರಿಹಾರ ಯೋಜನೆಯಡಿ ಕೇವಲ ೨ ಲಕ್ಷರೂ. ಅನುದಾನ ಬಂದಿತಾದರೂ ಇದು ಸಾಲದಾಯಿತು. ಹಾಗೆ ಸುಮ್ಮನಾದರೆ ಪ್ರಯೋಜನವಾಗುವುದಿಲ್ಲ ಎಂದು ಭಾವಿಸಿದ ಅಧಿಕಾರಿಗಳು, ಸಿಬ್ಬಂದಿ ಇತರರು ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಜ್ಜೆಇಟ್ಟರು. ಕೆಲವು ಧಾನಿಗಳಿಂದ ನೆರವು ಪಡೆದರು. ಗ್ರಾಮಸಹಾಯಕರು ತಾವೇ ಖುದ್ದು ಕಾಮಗಾರಿಯಲ್ಲಿ ತೊಡಗಿದರು. ಒಟ್ಟು ೮ ಲಕ್ಷರೂ. ವೆಚ್ಚದಲ್ಲಿ ಮೇಲ್ಚಾವಣಿ, ಶೌಚಾಲಯ, ಕಾಂಪೌAಡ್ ನಿರ್ಮಾಣ, ಹೂವಿನ ಕೈತೋಟ, ಸಾರ್ವಜನಿಕರು ವಿಶ್ರಾಂತಿ ಪಡೆಯಲು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು ಇದೀಗ ಕಟ್ಟಡ ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿದೆ.
ಇಂದು ಜೀರ್ಣೋದ್ಧಾರವಾದ ಕಟ್ಟಡವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಮನಸಿದ್ದರೆ ಮಾರ್ಗ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ ಬಿದ್ದುಹೋಗುವ ಹಂತಕ್ಕೆ ತಲುಪಿದ್ದ ಬಿಕ್ಕೋಡು ನಾಡಕಚೇರಿಗೆ ಮರು ಜೀವಕೊಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಇದು ಮಾದರಿಯಾಗಿದೆ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಕಂದಾಯ ಇಲಾಖೆ ನಿರಂತರವಾಗಿ ಶ್ರಮಿಸಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದರು.
ಇದೆ ವೇಳೆ ಕಟ್ಟಡಕ್ಕೆ ಹೆಚ್ಚಿನ ಶ್ರಮ ಹಾಕಿದ ಗ್ರಾಮಸಹಾಯಕರಾದ ಮಹೇಶ್, ಹರೀಶ್, ಲಕ್ಕಯ್ಯ, ರಂಜಿತ, ವಾಸಪ್ಪ, ಹಾಲಪ್ಪ, ಸತೀಶ್, ಕುಮಾರ್, ಶಿವರಾಜ್, ಯೋಗೇಶ್ ಇವರನ್ನು ಸನ್ಮಾನಿಸಲಾಯಿತು. ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾಕಾಂತರಾಜು, ಹಾಗೂ ಜಯಕರ್ನಾಟಕ ಸಂಘಟನೆ ಪ್ರಮುಖರು ಡಿಸಿಗೆ ಮನವಿ ಮಾಡಿದರು. ಸಮಾರಂಭದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಉಪವಿಭಾಗಾಧಿಕಾರಿ ಗಿರೀಶ್‌ನಂದನ್, ತಹಸೀಲ್ದಾರ್ ಎನ್.ವಿ.ನಟೇಶ್, ತಾ.ಪಂ.ಇಒ ರವಿಕುಮಾರ್, ಆರೋಗ್ಯಾಧಿಕಾರಿ ಡಾ.ವಿಜಯ, ಉಪತಹಸೀಲ್ದಾರ್ ಪ್ರದೀಪ್, ಪಿಎಸ್‌ಐ ಮಹೇಶ್, ಪ್ರಮುಖರಾದ ನಟರಾಜ್, ರಾಜಸ್ವನಿರೀಕ್ಷಕ ಅಸ್ಲಂಪಾಷ, ಗ್ರಾ.ಲೆಕ್ಕಾಧಿಕಾರಿಗಳು ಇತರರು ಇದ್ದರು. (ಅನಂತರಾಜೇಅರಸು-ಬೇಲೂರು)
photo:
೧)ಬೇಲೂರು ತಾ.ಬಿಕ್ಕೋಡಿನಲ್ಲಿ ಜೀರ್ಣೋದ್ಧಾರಗೊಂಡ ನಾಡಕಚೇರಿಯನ್ನು ಡಿಸಿ ಉದ್ಘಾಟಿಸುತ್ತಿರುವುದು
೨)ನಾಡಕಚೇರಿ ಕಟ್ಟಡ
೩) ಉಪತಹಸೀಲ್ದಾರ್ ಪ್ರದೀಪ್, ಆರ್‌ಐ.ಅಸ್ಲಪಾಷ ಹಾಗೂ ನಾಡಕಚೇರಿ ನೌಕರರು
೪) ಸನ್ಮಾನಿತರಾದ ಗ್ರಾಮಸಹಾಯಕರು ಮತ್ತು ಶಾಸಕ ಕೆ.ಎಸ್.ಲಿಂಗೇಶ್ ಇನ್ನಿತರ ಅಧಿಕಾರಿ ವೃಂದ
