ಹಾಸನ ಜೂ.೦೨:- ಕೃಷಿಯನ್ನು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಸಬ್ಸಿಡಿ ಯೂರಿಯಾವನ್ನು ಬಳಸುವನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಯೂರಿಯಾ ರಸಗೊಬ್ಬರ ಬಳಕೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಗಳಿಗೆ ಸರಬರಾಜಾಗುವ ರಸಗೊಬ್ಬರಗಳ ದಾಸ್ತಾನು ಮತ್ತು ಮಾರಾಟ ಬೆಲೆ ನಿಯಂತ್ರಿಸಬೇಕು ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿರುವ ಕೈಗಾರಿಕೆಗಳನ್ನು ಗುರುತಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ರಸಗೊಬ್ಬರ ನಿಯಂತ್ರಣ ಆದೇಶದನ್ವಯ ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳನ್ನು ಪತ್ತೆಹಚ್ಚಿ ತಂಡವನ್ನು ರಚಿಸಿಕೊಂಡು ನಿಯಮ ಉಲ್ಲಂಘಿಸುವ ಕೈಗಾರಿಕೆಗಳನ್ನು ರದ್ದುಗೊಳಿಸಬೇಕು ಈ ಕಾರ್ಯದಿಂದ ಸರ್ಕಾರದ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಯೂರಿಯಾ ರಸಗೊಬ್ಬರ ದುರುಪಯೋಗವನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪಶು ಹಾಗೂ ಕೋಳಿ ಆಹಾರದಲ್ಲಿ ಪ್ರೋಟೀನ್ ಬದಲಾಗಿ ಯೂರಿಯಾ ರಸಗೊಬ್ಬರ ಬಳಕೆ ಮಾಡುತ್ತಿದ್ದು ಅದರ ತಡೆಗೆ ಸೂಕ್ತ ಕ್ರಮ ವಹಿಸಬೇಕು ಬಣ್ಣಗಳಲ್ಲಿ ಯೂರಿಯಾ ಫಾರ್ಮಾಲ್ಡಿಹೈಡ್ ರಾಳವನ್ನು ಎಮಲ್‌ಷನ್ ಬೈಂಡರ್ ಆಗಿ ಮತ್ತು ಸಕ್ಕರೆ ಅಥವಾ ಮೊಲಾಸಸ್ ಅನ್ನು ಆಲ್ಕೋಹಾಲ್‌ನ ಪರಿವರ್ತನೆಯಲ್ಲಿ ಕಚ್ಚಾ ವಸ್ತುವಾಗಿ ಹಾಗೂ ಇನ್ನಿತರೆ ಕೃಷಿಯೇತರ ಚಟುವಟಿಕೆಗಳಲ್ಲಿ ಬಳಕೆ ಮಾಡಲಾಗುತ್ತಿದೆ ಅವುಗಳ ಮೇಲೆ ಸೂಕ್ತ ನಿಯಂತ್ರಣ ಹೇರಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್, ಉಪ ಕೃಷಿ ನಿರ್ದೇಶಕರಾದ ಕೋಕಿಲ ಹಾಗೂ ಸುಷ್ಮಾ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.