ಸಕಲೇಶಪುರ: ಗಲಭೆ ತಡೆಯಲು ಹೋದ ಪೊಲೀಸರಿಗೆ ಮಚ್ಚು ತೋರಿಸಿ ಬೆದರಿಸಿ ಪೊಲೀಸ್ ಕಾರಿನ ಮೇಲೆ ಕಲ್ಲುಹೊಡೆದಿರುವ ಘಟನೆ ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಆಗ್ರಹಾರ ಶಾಲೆ ಹಾಗೂ ಆಗ್ರಹಾರ ಕಾಲೋನಿಗೆ ಹೋಗಲು ಕಳೆದ ಹಲವು ವರ್ಷಗಳಿಂದ 10 ಅಡಿರಸ್ತೆಯನ್ನು ಸಾರ್ವಜನಿಕರು ಬಳಸುತಿದ್ದಾರೆ. ಆದರೆ ತಾಲೂಕಿನ ಕಬ್ಬಿನಗದ್ದೆ ಗ್ರಾಮದ ಸದಾಶಿವ ಎಂಬುವರು ಈ ರಸ್ತೆಯು ನಮ್ಮ ನಿವೇಶನಕ್ಕೆ ಸೇರಿದೆ ಎಂದು ರಸ್ತೆ ಒತ್ತುವರಿ ಮಾಡಿ ಕಾಂಪೌಡ್ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ,ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಗಲಭೆ ಏರ್ಪಟ್ಟಿತ್ತು.
ಈ ವೇಳೆ ಹೈವೇ ಪಟ್ರೋಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಲಭೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಈ ವೇಳೆ ರೊಚ್ಚಿಗೆದ್ದ ನಿವೇಶನದ ಮಾಲೀಕ ಸದಾಶಿವ ಅವರ ಪುತ್ರ ಪ್ರಶಾಂತ್ ಮಚ್ಚು ಹಿಡಿದು ಪೊಲೀಸರು ಹಾಗೂ ಸ್ಥಳೀಯರನ್ನು ಬೆದರಿಸಿದ್ದಲ್ಲದೆ ಪೊಲೀಸ್ ಕಾರು ಮೇಲೆ ಕಲ್ಲು ಎತ್ತಿಹಾಕಿ ಗೂಂಡಾಗಿರಿ ಮೆರೆದಿದ್ದಾನೆ. ವಿಚಾರ ತಿಳಿದು ಘಟನಾ ಸ್ಥಳಕ್ಕೆ ಹೆಚ್ಚಿನ ಪೊಲೀಸರು ಆಗಮಿಸುವ ವೇಳೆಗೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಈತನ ತಂದೆ ಸದಾಶಿವ ಹಾಗೂ ಬೈಕ್‌ನ್ನು ವಶಕ್ಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.