ಕಾಂಗ್ರೆಸ್ ಪ್ರತಿಭಟನೆ : ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಮೇಲೆ ಹೊರೆಯಾಗುವಂತ ಕೆಲಸ ಮಾಡುತ್ತಿದೆ : ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ

ಬೇಲೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಮೇಲೆ ಹೊರೆಯಾಗುವಂತ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಗಂಡಸಿ ಬಿ.ಶಿವರಾಂ ಹೇಳಿದರು.

ರಾಜ್ಯ ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ 5 ದಿನಗಳ ಕಾಲ ಪ್ರತಿಭಟನೆ ನಡೆಸುವಂತೆ ಕರೆ ನೀಡಿರುವ ಹಿನ್ನಲೆಯಲ್ಲಿ ಇಲ್ಲಿನ ನೆಹರೂನಗರದ ಭಾರತ್ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ

ನಡೆಸಿ ಮಾತನಾಡಿದ ಅವರು, ಕೇವಲ ಒಂದು ತಿಂಗಳಲ್ಲಿ ಕಚ್ಚಾತೈಲದ ಬೆಲೆಯನ್ನು ಮನಬಂದಂತೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಜೊತೆಯಲ್ಲಿ ಗ್ಯಾಸ್, ದಿನಸಿ ವಸ್ತುಗಳ ಬೆಲೆಯೂ ಗಗನಕ್ಕೆ ಹೋಗಿದೆ. ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ 100 ದಾಟಿಸಿ ದಾಖಲೆ ಬರೆದಿರುವ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಪೆಟ್ರೋಲ್ ಬೆಲೆ 56 ರೂ ಇತ್ತು, ಇದನ್ನು ಮುಂಬರುವ ಚುನಾವಣೆಯಲ್ಲಿ ಜನ ಮರೆಯುವುದಿಲ್ಲ. ಈ ಕಾರಣದಿಂದಲೇ ಬೇಲೂರು ಪುರಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ ಎಂದರು.


ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಲೀಟರ್ ಪೆಟ್ರೋಲ್‍ಗೆ ಇದ್ದಂತ 65 ರೂ. ಬೆಲೆಯನ್ನೇ ಭಾರಿ ಏರಿಕೆ ಎಂದು ಬಿಂಬಿಸಿದ ಬಿಜೆಪಿ ಪ್ರಮುಖರು ಪ್ರತಿಭಟನೆ ನಡೆಸಿದ್ದರು. ಈಗ ಶೇ.100 ದಾಟಿದೆಯಲ್ಲ ಇದಕ್ಕೆ ಏನು ಹೇಳುತ್ತಾರೆ? ಇವರಿಗೆ ನಾಚಿಕೆಯಾಗುವುದಿಲ್ಲವೇ ಬಿಜೆಪಿಯವರಿಗೆ ನಿಜಕ್ಕೂ ಅಧಿಕಾರ ನಡೆಸುವ ಯೋಗ್ಯತೆ ಇಲ್ಲ ರಾಜಿನಾಮೆ ಕೊಟ್ಟು ತೊಲಗಿ ಎಂದು ಕಿಡಿ ಕಾರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ, ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಹಗಲು ಕನಸು ತೋರಿಸುವ ಮೂಲಕ ಲೂಟಿ ಹೊಡೆಯುವ ಸರ್ಕಾರವಾಗಿದೆ. ಜನಸಾಮಾನ್ಯರ ಮೇಲೆ ದಿನನಿತ್ಯ ಬೆಲೆ ಏರಿಕೆ ಯಾಗುತ್ತಿದ್ದರೂ ಯಾರೂ ಇದರ ಬಗ್ಗೆ ದ್ವನಿ ಎತ್ತುತ್ತಿಲ್ಲ. ಜೆಡಿಎಸ್ ಪಕ್ಷದವರಿಗೆ ಎಲ್ಲಿ ಲಾಭ ಆಗುತ್ತದೊ ಅಲ್ಲಿ ಏನೆಲ್ಲಾ ನಡೆದರೂ ಮೌನವಾಗಿರುತ್ತಾರೆ, ಪ್ರತಿಭಟಿಸುವ ಧೈರ್ಯ ಕಳೆದುಕೊಂಡಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಜೋಕರ್‍ಗಳಿದ್ದಂತೆ, ರೈತರ ಪರ ಎಂದು ಬೊಬ್ಬೆ ಹೊಡೆಯುವ ಜೆಡಿಎಸ್ ಪಕ್ಷದವರಿಗೆ ನಾಚಿಕೆಯಾಗಬೇಕು. ಎಲ್ಲಾ ಬೆಲೆಗಳು ಗಗನಕ್ಕೆ ಏರಿದ್ದು ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡದೆ ಬೀದಿಗೆ ಸುರಿಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಶಾಂತಕುಮಾರ್ ಮಾತನಾಡಿ, ಇಂದು ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುತ್ತೇನೆಂದು ಭರವಸೆ ನೀಡಿದ್ದು ಇದೀಗ ಹುಸಿಯಾಗಿದೆ. ಹಣ ಕೊಟ್ಟರೆ ಎಲ್ಲಿ ಬೇಕಾದರೂ ಲಸಿಕೆ ಸಿಗುವಂತ ಕಾಳಸಂತೆ ಮಾರಾಟ ಸನ್ನಿವೇಶ ಸೃಷ್ಠಿಯಾಗಿದೆ. ತೈಲ ಬೆಲೆ ಹಾಗೂ ವಿದ್ಯುತ್ ಶಾಕ್ ನೀಡುವ ಮೂಲಕ ಬಡ ವರ್ಗದವರಿಗೆ ಹೆಚ್ಚಿನ ಹೊರೆ ಹೊರಸುತ್ತಿದ್ದಾರೆ. 

ಈ ಸರ್ಕಾರಕ್ಕೆ ಮುಂದೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ಜಿ.ಪಂ.ಸದಸ್ಯ ಸೈಯದ್ ತೌಫಿಕ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಪುರಸಭೆ ಸದಸ್ಯರಾದ ಅಶೋಕ್, ಅಕ್ರಂಪಾಷ, ಜಮಾಲುದ್ದೀನ್, ದಾನಿ, ಪ್ರಮುಖರಾದ ಸತೀಶ್, ಗಿರೀಶ್, ಜುಬೇರ್ ಅಹಮದ್, ಪೈಯಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.


ಬೇಲೂರಿನಲ್ಲಿ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ನಡೆಸಿದರು

Post a Comment

Previous Post Next Post