ಸರ್ಕಾರದಿಂದ ಹಣ ಬಿಡುಗಡೆಗೆ ಎಪಿಎಂಸಿ ಅಧ್ಯಕ್ಷ - ರೈತರ ಆಗ್ರಹ

ಅನಂತರಾಜೇ ಅರಸು: 

ರೈತರು ಕೃಷಿಮಾರುಕಟ್ಟೆ ಸಮಿತಿಗೆ ಜಿಲ್ಯೆಯಾಧ್ಯಂತ ಮಾರಾಟ ಮಾಡಿದ್ದ ರಾಗಿಯ ಬಾಕಿ ಹಣ 130 ಕೋಟಿ ರೂ. ಸರ್ಕಾರದಿಂದ ಬಾರದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ರಾಗಿ ಮತ್ತು ಭತ್ತವನ್ನು ಖರೀದಿಸಿದ್ದ ಕೃಷಿಮಾರುಕಟ್ಟೆ ಸಮಿತಿ ಭತ್ತದ ಹಣವನ್ನು ಪೂರ್ಣಪ್ರಮಾಣದಲ್ಲಿ ಪಾವತಿಸಿದ್ದು ರಾಗಿ ಖರೀದಿಸಿದ ಬಾಬ್ತು ಫೆಬ್ರವರಿ 18ನೇ ತಾರೀಖಿನವರಗಿನ ಬಾಕಿ ಹಣವನ್ನು ಪಾವತಿಸಲಾಗಿದೆ. ಫೆಬ್ರವರಿ ತಿಂಗಳ ನಂತರ ಜಿಲ್ಲೆಯಾದ್ಯಂತ 33.779 ರೈತರಿಂದ ಪ್ರತಿ ಕ್ವಿಂಟಾಲ್‍ಗೆ 3295 ರೂ.ದರದಲ್ಲಿ ಖರೀದಿಸಿದ 7.36 ಲಕ್ಷ ಕ್ವಿಂಟಾಲ್ ರಾಗಿಯ ಸುಮಾರು 130 ಕೋಟಿ ರೂ. ಬಾಕಿ ಹಣ ಬರಬೇಕಿದೆ.

ಬೇಲೂರಿಗೆ ಸುಮಾರು 7 ಕೋಟಿ ರೂ. ಬರಬೇಕಿದ್ದು ಉಳಿದ ಹಣ ಜಿಲ್ಲೆಯ ಎಲ್ಲಾ ತಾಲ್ಲೂಕಿನದ್ದಾಗಿದೆ. ಕರೊನಾ ಕಾರಣಕ್ಕಾಗಿಯೋ ಇನ್ನಿತರ ಕಾರಣ ಏನಿದೆಯೊ ಒಟ್ಟಾರೆ ಸರ್ಕಾರದಿಂದ ಹಣ ಪಾವತಿಯಾಗಿಲ್ಲ. ರಾಗಿ ಕೊಟ್ಟು 4 ತಿಂಗಳಾಗಿದ್ದು ಹಣ ಪಾವತಿಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರುಸ್ವಾಮಿಗೌಡ ಅವರು. ಇದೀಗ ಬಿತ್ತನೆಕಾರ್ಯ ಪ್ರಾರಂಭವಾಗಿದೆ. ರೈತರು ಒಡವೆ ಅಡವಿಟ್ಟು ಬಿತ್ತನೆ ಮಾಡಿದವರೂ ಇದ್ದಾರೆ. ಇದೀಗ ರಾಗಿಯ ಬಾಕಿ ಹಣ ಕೈಗೆ ಸಿಗದ ಕಾರಣ ಅದನ್ನೇ ನೆಚ್ಚಿಕೊಂಡವರು ನೋವು ಅನುಭವಿಸುತ್ತಿದ್ದಾರೆ. ಹಿಂದೆ ಮಾಡಿದ ಸಾಲವನ್ನೇ ತೀರಿಸಲಾಗದವರು ಪುನಃ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಕೊರಗು ರೈತ ನಂಜುಂಡಿ ಅವರದು.ಸರ್ಕಾರದಿಂದ ಬರಬೇಕಿರುವ ರೈತರ ಬಾಕಿ ಹಣದ ಬಗ್ಗೆ ಶಾಸಕ ಕೆ.ಎಸ್.ಲಿಂಗೇಶ್ ಇನ್ನಿತರ ಜನಪ್ರತಿನಿಧಿಗಳು ಧ್ವನಿ ಎತ್ತದ ಬಗ್ಗೆ ರೈತ ಸಂಘದ ಪ್ರಮುಖರು  ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಾಕಿ ಹಣ ಶೀಘ್ರ ಬಿಡುಗಡೆ ಮಾಡಬೇಕು


ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರಿನ ಕೃಷಿಮಾರುಕಟ್ಟೆ ಸಮಿತಿ ಅಧ್ಯಕ್ಷ ಚಿನ್ನೇನಹಳ್ಳಿ ಮಹೇಶ್ ಅವರು, ರೈತರು ಸಾಲಸೋಲ ಮಾಡಿ ಆಭರಣ ಅಡವಿಟ್ಟು ರಾಗಿ  ಬಿತ್ತನೆ ಮಾಡಿದ್ದಾರೆ. ರಾಗಿ ಮಾರಿ ಬಂದ ಹಣದಿಂದ ಆಭರಣ ಬಿಡಿಸುವ ಉದ್ದೇಶ ಇಟ್ಟುಕೊಂಡಿರುತ್ತಾರೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುವವರೂ ಇದ್ದಾರೆ. ಇದೀಗ ಬಾಕಿ ಹಣ ಬಾರದೆ ಸಂಕಷ್ಟ ಎದುರಿಸುವಂತಾಗಿದೆ. ಬಿತ್ತನೆಕಾರ್ಯ ಆರಂಭಗೊಂಡಿದ್ದು ಕೃಷಿಚಟುವಟಿಕೆಗೆ ಅಗತ್ಯವಿರುವ ಹಣವೂ ರೈತರ ಬಳಿಯಿಲ್ಲದೆ ಹಿಂಸೆ ಅನುಭವಿಸುತ್ತಿದ್ದು ಸರ್ಕಾರ ಕೂಡಲೆ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Post a Comment

Previous Post Next Post