ವರದಿ: ಅನಂತರಾಜೇಅರಸು ಬೇಲೂರು
ಅಂತರಾಷ್ಟ್ರೀಯ ಮನ್ನಣೆ ಪಡೆದಿರುವ ಮತ್ತು ಯುನೊಸ್ಕೊ ತಾತ್ಕಾಲಿಕ ಪಟ್ಟಿಗೆ ಸರ‍್ಪಡೆಗೊಂಡಿರುವ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಸೇರಿದ ನವರಂಗ ಮಂಟಪ (ಕಲ್ಲುಚಾವಡಿ ಮಂಟಪ) ಶಿಥಿಲಾವಸ್ಥೆ ಕಂಡಿದ್ದು ನೆಲಕಚ್ಚುವ ಸ್ಥಿತಿಗೆ ತಲುಪಿ, ಬಲಿಗಾಗಿ ಕಾಯುತ್ತಿದೆ.
ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಈ ನವರಂಗ ಮಂಟಪದಲ್ಲಿ ದೇಗುಲ ನಿರ್ಮಾಣ ಹಂತದಿಂದಲೂ ವೈಭವಯುತವಾಗಿ ದೇವರ ಉತ್ಸವ ಮೂರ್ತಿಗಳ ಪೂಜಾಕಾರ್ಯ ನಡೆದಿದೆ. ರಥೋತ್ವದಂದು ಹಾಗೂ ಇನ್ನಿತರ ಪ್ರಮುಖ ಉತ್ಸವಗಳಂದು ಈ ಕಲ್ಲುಚಾವಡಿ ಮಂಟಪದಲ್ಲಿ ದೇವರ ಉತ್ಸವದ ಅಡ್ಡೆಯನ್ನು ಇರಿಸಿ ವಿಶೇಷವಾಗಿ ಪೂಜಿಸುವುದು ನಡೆಯುತ್ತಿತ್ತು. ಇದಕ್ಕಾಗೇ ಈ ಮಂಟಪವನ್ನು ನಿರ್ಮಿಸಲಾಗಿತ್ತು.
ವರ್ಷ ಕಳೆದಂತೆ ದೇಗುಲದ ಪೂಜಾ ವಿಧಿವಿಧಾನದಲ್ಲಿ ಬಸಲಾವಣೆಯಾದಂತೆ ಈ ನವರಂಗ ಮಂಟಪದಲ್ಲಿ ಉತ್ಸವಮೂರ್ತಿ ಇರಿಸಿ ಪೂಜಿಸುವುದನ್ನು ಸ್ಥಗಿತಗೊಳಿಸಲಾಯಿತು. ಆನಂತರ ಪಟ್ಟಣದ ಪ್ರಪ್ರಥಮ ಕನ್ನಡಪರ ಸಂಘವಾದ ಬೇಲೂರು ಸಂಘ ಸ್ಥಾಪನೆ ಆದಾಗ ಕಾಲಿಯಿದ್ದ ನವರಂಗ ಮಂಟಪದ ಒಂದು ಭಾಗದಲ್ಲಿ ಕೊಠಡಿಯೊಂದನ್ನು ಮಾಸಿಕ ೧ ರೂಪಾಯಿಗೆ ಬಾಡಿಗೆ ಪಡೆದು ಸಂಘದ ಚಟುವಟಿಕೆಯನ್ನು ಇಲ್ಲಿ ನಡೆಸಲಾಗುತ್ತಿತ್ತು. ಈ ಮಂಟಪದಲ್ಲಿ ಅಂದಿನಿಂದಲೂ ಸಾಂಸ್ಕೃತಿಕ ಇನ್ನಿತರ ಜನಪರವಾದ ಕಾರ್ಯಕ್ರಮಗಳು ನಡೆಯುತ್ತಿದ್ದವು.
ಆನಂತರ ನವರಂಗ ಮಂಟಪದ ಉಳಿದ ಸ್ಥಳದಲ್ಲಿ ಶ್ರೀವಿನಾಯಕ ಹಾಗೂ ಅಯ್ಯಪ್ಪಸ್ವಾಮಿ ದೇವರನ್ನು ವರ್ಷಕ್ಕೊಮ್ಮೆ ಪ್ರತಿಷ್ಠಾಪಿಸುವುದು ಇಂದಿಗೂ ನಡೆದುಕೊಂಡು ಬಂದಿದೆ. ಬೇಲೂರು ಸಂಘದ ಚಟುವಟಿಕೆ ಕಡಿಮೆಯಾಗತೊಡಗಿದಾಗ ಕನ್ನಡಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿದ್ದ ಅನಂತರಾಜೇಅರಸು ಅವರ ಅವಧಿಯಲ್ಲಿ ಬೇಲೂರು ಸಂಘದವರ ಅನುಮತಿಯೊಂದಿಗೆ ಸಂಘ ನಡೆಯುತ್ತಿದ್ದ ಕೊಠಡಿಯಲ್ಲಿ ಗ್ರಂಥಾಲಯ ಆರಂಭಿಸಲಾಯಿತು. ಕೆಲವು ವರ್ಷ ನಡೆದ ಗ್ರಂಥಾಲಯ ಸ್ಥಗಿತಗೊಂಡಿದ್ದು ಫಲಕ ಮಾತ್ರ ಇಂದಿಗೂ ಕಂಡುಬರುತ್ತಿದೆ. ಕೊಠಡಿಯ ಗೋಡೆಗಳು ಬಿರುಕುಬಿಟ್ಟಿದೆ, ಗೋಡೆಯೊಳಗೆ ಆಲದ ಮರದ ಬೇರುಗಳು ಸೇರಿಕೊಂಡಿವೆ. ಮಂಟಪದ ಮೇಲೆ ಗಿಡಗೆಂಟೆಗಳು ರಾರಾಜಿಸುತ್ತಿವೆ. ಮಂಟಪದೊಳಗೆ ಅನೈತಿಕ ಚಟುವಟಿಕೆಗಳು ಸಹ ನಡೆದಿರುವುದು ಕಂಡುಬರುತ್ತಿದೆ. ಗಲೀಜಿನಿಂದ ಕೂಡಿದ್ದು ತ್ಯಾಜ್ಯ ಶೇಖರಣೆಯಾಗಿದೆ. ಬಿಕ್ಷುಕರು ಇಲ್ಲಿ ಮಲಗುವುದು ಕಂಡುಬರುತ್ತಿದೆ.
ಈ ಎಲ್ಲಾ ಬೆಳವಣಿಗೆ, ಚಟುವಟಿಕೆಯ ನಡುವೆ ಈ ನವರಂಗ ಕಲ್ಲುಚಾವಡಿ ಮಂಟಪ ಅವನತಿಯತ್ತ ಸಾಗುತ್ತಿರುವುದು ಕಂಡುಬರುತ್ತಿದೆ. ಮಂಟಪದ ಕಲ್ಲುಗಳು ನೆಲಹಾಸುಗಳು ಜರುಗುತ್ತಿವೆ. ಭಾರಿಗಾತ್ರದ ಕಲ್ಲುಕಂಬಗಳಿಂದ, ಚಪ್ಪಡಿಗಳಿಂದ ನಿರ್ಮಿಸಿರುವ ಮಂಟಪವೇನಾದರೂ ನೆಲಕಚ್ಚಿದರೆ ಭಾರಿ ಅನಾಹುತ ಸಂಭವಿಸುವುದು ಗ್ಯಾರಂಟಿ. ಮಂಟಪದ ಎದಿರು ತಾತ್ಕಾಲಿಕವಾದ ರಂಗಮಂದಿರವೊಂದನ್ನು ನಿರ್ಮಿಸಲಾಗಿದ್ದು ಇಲ್ಲಿ ಅದು ಇದು ಕಾರ್ಯಕ್ರಮಗಳು ಜರುಗುತ್ತಿರುತ್ತವೆ.
ಈ ಶಿಥಿಲ ಮಂಟಪದ ಅಕ್ಕಪಕ್ಕದಲ್ಲಿ ವಾಸದ ಮನೆಗಳಿದ್ದು ಇದರ ಪಕ್ಕದಲ್ಲೆ ರಸ್ತೆ ಇರುವುದರಿಂದ ಜನಸಂಚಾರ ಇದ್ದೇ ಇರುತ್ತದೆ. ಅಲ್ಲದೆ ಪ್ರತಿವರ್ಷ ನಡೆಯುವ ರಥೋತ್ಸವದ ವೇಳೆ ಈ ಶಿಥಲಾವಸ್ಥೆಯ ಮಂಟಪದ ಮೇಲೆ ನೂರಾರು ಭಕ್ತರು ರಥೋತ್ಸವ ನೋಡಲು ಹತ್ತುತ್ತಾರೆ. ಒಂದು ಕಡೆ ಅಯ್ಯಪ್ಪಸ್ವಾಮಿ ಉತ್ಸವ, ಗಣಪತಿ ಉತ್ಸವ, ರಥೋತ್ಸವ ಇಂತಹ ಸಂದರ್ಭದಲ್ಲಿ ಮಂಟಪವೇನಾದರೂ ಕಳಚಿಬಿದ್ದರೆ ಆಗುವ ಅನಾಹುತ ಊಹಿಸಲೂ ಅಸಾಧ್ಯ.
ಅನುಮತಿಯಿಲ್ಲ: ಈ ನವರಂಗಮಂಟಪ ಶಿಥಿಲಗೊಂಡಿರುವ ಬಗ್ಗೆ ಹಾಗೂ ದುರಸ್ತಿ ಮಾಡಿಕೊಡುವ ಇಲ್ಲವೆ, ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ದೇಗುಲದ ಮುಜರಾಯಿ ಇಲಾಖೆ ಅಧಿಕಾರಿಗಳು ಪುರಾತತ್ವ ಇಲಾಖೆಗೆ ಹಲವು ವರ್ಷಗಳಿಂದ ಹಲವಾರು ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ. ಮಂಟಪ ನಮ್ಮದಾಗಿದ್ದು ಅದನ್ನು ಕೆಡವಲು, ದುರಸ್ತಿ ಮಾಡಿಕೊಳ್ಳಲು ನಿಮಗೆ ಅಧಿಕಾರವಿಲ್ಲ ಎನ್ನುವ ಪುರಾತತ್ವ ಇಲಾಖೆ ಅಧಿಕಾರಿಗಳು ತಾವೂ ದುರಸ್ತಿ ಮಾಡಿಸುತ್ತಿಲ್ಲ, ಏನಾದರೂ ಅನಾಹುತವಾದರೆ ಯಾರು ಹೊಣೆ? ನಾವು ರಿಪೇರಿ ಮಾಡಿಸುತ್ತೇವೆಂದರೂ ಅವಕಾಶ ಕೊಡುವುದಿಲ್ಲ ಅವರೂ ಮಾಡಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೇಗುಲದ ಕಾರ್ಯನಿರ್ವಾಹಕಾಧಿಕಾರಿ ವಿದ್ಯುಲ್ಲತಾ ಅವರು.
ಸಂಘಟೆಗಳ ಮೌನ: ಈ ಕಲ್ಲುಮಂಟಪ ನೆಲಕ್ಕುರುಳಿದರೆ ಆಗುವ ಪರಿಣಾಮವನ್ನು ಮನಗಂಡಿರುವ ಮತ್ತು ತಾಲ್ಲೂಕಿನ ಹಲವಾರು ಜ್ವಲಂತ ಸಮಸ್ಯೆಯತ್ತ ಹೋರಾಟ ನಡೆಸಿಕೊಂಡು ಬಂದಿರುವ ಇಲ್ಲಿನ ಕನ್ನಡಪರ ಸಂಘಟನೆಗಳು ಈ ವಿಷಯದಲ್ಲಿ ಏಕೆ ಮೌನವಾಗಿವೆ ಎಂಬುದು ತಿಳಿದಿಲ್ಲ. ಕೊರೊನಾ ಸಂದರ್ಭ ಪ್ರತಿಭಟನೆ ಬೇಡವೆಂದರೂ ಉಳಿದಂತೆ ಪತ್ರ ಬರೆಯುವುದು, ನಿಯೋಗ ತೆರಳಿ ಒತ್ತಾಯಿಸುವುದು ಇತ್ಯಾದಿ ಕ್ರಮಗಳತ್ತಲಾದರೂ ಯೋಚಿಸಬಹುದು ಎಂಬುದು ಎಲ್ಲರ ಆಶಯ.
ಇದೀಗ ಶಾಸಕ ಕೆ.ಎಸ್.ಲಿಂಗೇಶ್ ಅವರ ಗಮನಕ್ಕೆ ದೇಗುಲದ ಅಧಿಕಾರಿಗಳು ಕಲ್ಲುಚಾವಡಿ ಮಂಟಪದ ಮಾಹಿತಿ ನೀಡಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಭರವಸೆ ಭರವಸೆಯಾಗಿಯೇ ಉಳಿಯದೆ ಕಾರ್ಯೋನ್ಮುಖವಾಗಬೇಕೆಂಬುದು ಜನಾಶಯ. ಇಲ್ಲದಿದ್ದರೆ ಮುಂದಾಗುವ ದುಶ್ಪರಿಣಾಮದ ಹೊಣೆ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ನಾವೆಲ್ಲರೂ ಹೊರಬೇಕಾಗಬಹುದು. ಇದಕ್ಕೆ ಅವಕಾಶ ಕೊಡಬಾರದು ಎಂಬುದು ಎಲ್ಲರ ಮನವಿ.