ಹಾಸನ: ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳನ್ನು ಖರೀದಿಸುವಾಗ ರೈತರುಗಳಿಗೆ ಬಿಲ್ಲ್ ನೀಡಿ, ಮಾರಾಟ ಮಳಿಗೆಗಳ ಮುಂದೆ ಧರಗಳ ಪಟ್ಟಿಯ ನಾಮಪಳಕ ಹಾಕಬೇಕು ಎಂದು ಹೋಬಳಿಯ ಕೃಷಿ ಅಧಿಕಾರಿಯಾದ ಹೆಚ್.ಜೆ. ಪ್ರಸಾದ್ ಸಲಹೆ ನೀಡಿದರು.
ತಾಲೂಕಿನ ದುದ್ದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರು, ಜನ ಪ್ರತಿನಿಧಿಗಳು ಹಾಗೂ ರಸಗೊಬ್ಬರ, ಕೀಟನಾಶಕ, ಹಾಗೂ ಬಿತ್ತನೆ ಬೀಜ ಮಾರಾಟಗಾರರಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಪರಿಕರ ಮಾರಾಟಗಾರರಿಗೆ ಲೈಸೆನ್ಸ್ ನ ಷರತ್ತಿನಲ್ಲಿ ತಿಳಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣಗಳು ಕಂಡುಬಂದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳನ್ನು ಖರೀದಿಸುವ ರೈತರಿಗೆ ನಿಗದಿತ ನಮೂನೆಯಲ್ಲಿ ಬಿಲ್ಲುಗಳನ್ನು ನೀಡಲು, ತಮ್ಮ ಮಾರಾಟ ಮಳಿಗೆಗಳ ಮುಂದೆ ದರ ಪಟ್ಟಿ ಹಾಗೂ ಹಾಲಿ ದಾಸ್ತಾನಿನ ವಿವರಗಳನ್ನೊಳಗೊಂಡ ಫಲಕವನ್ನು ಎದ್ದು ಕಾಣುವಂತೆ ಪ್ರದರ್ಶನ ಮಾಡಲು ಸೂಚಿಸಿದರು. ಕೀಟನಾಶಕಗಳನ್ನು ಮಾರಾಟ ಮಾಡುವಾಗ ರೈತರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ವಿತರಿಸಲು ತಿಳಿಸಿದರು. ಮಳಿಗೆಗಳಲ್ಲಿ ಅವಧಿ ಮುಗಿದ ದಾಸ್ತಾನುಗಳನ್ನು ಮಾರ್ಗಸೂಚಿಯಂತೆ ವಿಲೇವಾರಿ ಮಾಡಲು ಸೂಚಿಸಿದರು. ಹೋಬಳಿ ವ್ಯಾಪ್ತಿಯಲ್ಲಿ ಎಲ್ಲೇ ಕಳಪೆ ರಸಗೊಬ್ಬರಗಳು ಕಂಡುಬAದಲ್ಲಿ ಮಾಹಿತಿ ನೀಡಲು ತಿಳಿಸಿದರು. ಸಭೆಯಲ್ಲಿ ನೆರೆದಿದ್ದ ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿ, ರಸಗೊಬ್ಬರ ಖರೀದಿಸುವಾಗ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ಸಲ್ಲಿಸಿ ಪಿ.ಓ.ಎಸ್ ಯಂತ್ರದ ಮೂಲಕವೇ ಬಿಲ್ಲುಗಳನ್ನು ಪಡೆಯಲು ಮಾಹಿತಿ ನೀಡಲಾಯಿತು. ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಮಳಿಗೆಗಳ ಬಗ್ಗೆ ಹಾಗೂ ನಕಲಿ / ಕಳಪೆ ಎಂದು ಅನುಮಾನ ಬಂದಲ್ಲಿ ಕೂಡಲೇ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಲು ವಿನಂತಿಸಿದ ಅವರು, ಇದರಿಂದ ಸೂಕ್ತ ಸಮಯದಲ್ಲಿಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹರೀಶ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಿವಸ್ವಾಮಿ, ರೈತ ಹೋರಾಟಗಾರರಾದ ಅಣ್ಣಜಪ್ಪ, ಪುಟ್ಟಸ್ವಾಮಿಗೌಡ್ರು, ಹೋಬಳಿಯ ರೈತರಾದ ಹೊನ್ನೇಗೌಡ್ರು, ದೊರೆ, ದಿವಾಕರ್, ನವೀನ್, ಪ್ರಸನ್ನ, ರಿತೇಶ್, ದೇವರಾಜೇಗೌಡರು, ಗಿರೀಶ್, ಹೊಯ್ಸಳ ರೈತ ಉತ್ಪಾದಕ ಗುಂಪಿನ ಕ್ಷೇತ್ರಾಧಿಕಾರಿಗಳಾದ ಮಲ್ಲೇಶ್ ರವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕರಾದ ಜಯಶಂಕರ್ ರವರು ಹಾಗೂ ಹೋಬಳಿಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಮತ್ತು ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು.
