ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ: ಕೋಡಿಮಠ ಶ್ರೀ ಭವಿಷ್ಯ

 ಕಾರವಾರ: ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶಿರಸಿ ತಾಲೂಕಿನ ನೇರಲಕಟ್ಟೆ ಗ್ರಾಮದಲ್ಲಿರುವ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದರು. 


ನವೆಂಬರ್‍ ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ. ಆಗಸ್ಟ್ ಮೂರನೇ ವಾರದಿಂದ ಕೋವಿಡ್ ಹಾವಳಿ ಹೆಚ್ಚಾಗಲಿದೆ. ರೋಗದಿಂದ ಜನರು ಸಾಯುವುದಿಲ್ಲ. ರೋಗದ ಭಯದಿಂದಲೇ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಜನವರಿವರೆಗೂ ರೋಗ ಭಾದೆ ಇರಲಿದೆ, ಜನ ಧೈರ್ಯ ಕಳೆದುಕೊಳ್ಳಬಾರದು. ಕುಂಭ ರಾಶಿಯಲ್ಲಿ ಗುರು ಬಂದಿದ್ದಾನೆ ಜಲಸ್ತಂಭನವಿದೆ, ಅನೇಕ ಸಾವು ನೋವುಗಳು ಆಗುವುದಿದೆ. ಮಳೆ, ಗಾಳಿ ಅಧಿಕವಾಗಲಿದೆ. ಕೆರೆಕಟ್ಟೆಗಳು ಭರ್ತಿಯಾಗಿ, ಜಲಪ್ರಳಯ ಸಂಭವಿಸಲಿದೆ. ಪಂಚಭೂತಗಳಿಂದಲೂ ಈ ವರ್ಷ ಅನಾಹುತ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Advertisement


Post a Comment

Previous Post Next Post