ಬೇಲೂರು : ವಿಶ್ವ ವಿಖ್ಯಾತ ಹಾಗೂ ಶಿಲ್ಪ ಕಲೆಗೆ ಹೆಸರು ಮಾಡಿ ದೇಶ ವಿದೇಶದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಹಾಸನ ಜಿಲ್ಲೆ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಬಾಗಿಲನ್ನು ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸೋಮವಾರ ತೆರೆದು ಭಕ್ತರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಈ ಸಂದರ್ಭ ಹಾಜರಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯಲ್ಲತಾ ದ್ವಾರಬಾಗಿಲಿಗೆ ಪೂಜೆ ಸಲ್ಲಿಸಿದರು. ಆನಂತರ ಶ್ರೀ ಚನ್ನಕೇಶವ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕರು ದೇವರ ದರ್ಶನ ಪಡೆದರಲ್ಲದೆ ಅರ್ಚಕ ಸಮೂಹವನ್ನು ಗೌರವಿಸಿದರು.
ಆನಂತರ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಕೊರೊನಾ ಒಂದು ಮತ್ತು ಎರಡನೆ ಅಲೆ ಕಾರಣದಿಂದ ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಕೊರೊನಾ ಪ್ರಕರಣ ಇಳಿಮುಖ ಕಂಡಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ದೇವಾಲಯದ ಬಾಗಿಲನ್ನು ತೆರಯಲಾಗಿದೆ, ದೇಗುಲಕ್ಕೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುದನ್ನು ಮರೆಯಬಾರದು, ನಿಯಮಗಳ ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದರು.
ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ, ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಆದರೆ ದಾಸೋಹದ ವ್ಯವಸ್ಥೆಗೆ ಸರ್ಕಾರದಿಂದ ಆದೇಶ ಬರಬೇಕಿದೆ, ದೇಗುಲಕ್ಕೆ ಬರುವ ಭಕ್ತರು ಕೊರೊನಾ ನಿಯಮ ಪಾಲಿಸಬೇಕೆಂದರು.
ಆಗಮಿಕ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್, ಶ್ರೀನಿವಾಸಭಟ್ಟರ್ ಇದ್ದರು.