ಬೇಲೂರು: ಹಳೇಬೀಡು ಹಾಗೂ ಬೇಲೂರು ಗೃಹರಕ್ಷಕದಳ ಸಿಬ್ಬಂದಿ ಇಲ್ಲಿನ ಯಗಚಿ ಜಲಾಶಯದ ಬಳಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಿದರು.
ಇದೆ ವೇಳೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವೀರಭದ್ರಯ್ಯ ಅವರ ಪತ್ನಿ ಧನಲಕ್ಷೀ ಅವರು ಸಹ ತಮ್ಮ ಪುತ್ರಿಯರೊಂದಿಗೆ ಗಿಡ ನೆಟ್ಟರು. ಈ ಸಂದರ್ಭ ಗಿಡ ನೆಟ್ಟು ಮಾತನಾಡಿದ ಯಗಚಿ ಜಲಾಶಯ ಉಸ್ತುವಾರಿ ಜೂನಿಯರ್ ಎಂಜಿನಿಯರ್ ಶಿವಕುಮಾರ್, ಪ್ರಕೃತಿ ನಾಶದಿಂದ ಅನಾರೋಗ್ಯ ಸೇರಿದಂತೆ ಹಲವಾರು ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಇದು ದೇಶದ ಅಭಿವೃದ್ಧಿಗೂ ಹಿನ್ನಡೆಯಾಗಲಿದೆ. ಪ್ರತಿಯೊಬ್ಬರೂ ಗಿಡ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ. ಇಂದು ಗೃಹರಕ್ಷಕದಳ ಸಿಬ್ಬಂದಿ ಗಿಡ ನೆಡುತ್ತಿರುವುದು ಸಂತೋಷವಾಗಿದೆ ಎಂದು ಹೇಳಿದರು.
ಹಳೇಬೀಡು ಗೃಹರಕ್ಷಕ ದಳದ ಘಟಕಾಧಿಕಾರಿ ಗಂಗಾಧರಪ್ಪ ಮಾತನಾಡಿ, ಇಂದು ಪರಿಸರ ಸಂರಕ್ಷಣೆ ಆಗುತ್ತಿಲ್ಲ. ಪರಿಸರ ಸಂರಕ್ಷಣೆ ಎಲ್ಲರೂ ಮಾಡಲೇಬೇಕಿದೆ. ರಾಜ್ಯದಲ್ಲಿ ಗೃಹರಕ್ಷಕ ದಳ ಇಲಾಖೆಯಿಂದ ಒಂದು ಲಕ್ಷ ಗಿಡಗಳನ್ನು ಜುಲೈ ೨೧ ರೊಳಗೆ ನೆಡಬೇಕೆಂದು ನಿರ್ಧರಿಸಲಾಗಿದೆ. ಇದೀಗ ಮೇಲಾಧಿಕಾರಿಗಳಿಂದ ಹಳೇಬೀಡು ಹಾಗೂ ಬೇಲೂರು ಗೃಹರಕ್ಷಕ ಘಟಕಕ್ಕೆ ಗಿಡಗಳ ನೆಡುವಂತೆ ಸೂಚನೆ ಬಂದಿದೆ. ಅದರಂತೆ ನಾವು ಈ ದಿನ ಗಿಡಗಳನ್ನು ನೆಡುತ್ತಿದ್ದೇವೆ ಎಂದರು.
ಬೇಲೂರು ಗೃಹರಕ್ಷಕ ದಳದ ಘಟಕಾಧಿಕಾರಿ ದೇವರಾಜ್ ಮಾತನಾಡಿ, ಯಗಚಿ ಜಲಾಶಯದ ಸಮೀಪ ಗೃಹರಕ್ಷಕ ದಳದ ಎರಡೂ ಘಟಕಗಳಿಂದ ಗಿಡಗಳ ನೆಡುತ್ತಿದ್ದೇವೆ. ನಮಗೆ ಗೃಹರಕ್ಷಕ ಸಿಬ್ಬಂದಿ, ಯಗಚಿ ಜಲಾಶಯ ಅಧಿಕಾರಿಗಳು ಎಲ್ಲರೂ ಸಹಕಾರ ನೀಡಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಗೃಹರಕ್ಷಕ ಸಿಬ್ಬಂದಿಗಳಾದ ರಮೇಶ್, ಮಂಜಯ್ಯ, ಸತೀಶ್, ಅಭಿಜಿತ್, ಸಂದೇಶ್, ಆನಂದ್, ರಂಜಿತ್, ಕುಮಾರ್, ಮಹೇಶ್, ರಾಮಚಂದ್ರಪ್ಪ ಇತರರು ಇದ್ದರು.