ಬೇಲೂರು:ಕೊರೊನಾ ಲಸಿಕೆ ಪಡೆಯುವ ಮೂಲಕ ಕೊರೊನಾ ರೋಗವನ್ನು ದೂರವಾಗಿಸುವ ಅಗತ್ಯವಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯಶ್ರೇಣಿ ನ್ಯಾಯಾಧೀಶ ವೀರಭದ್ರಪ್ಪ ಹೇಳಿದರು.
ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಲಸಿಕೆ ಅಭಿಯಾನ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಲಸಿಕೆ ಅಭಿಯಾನ ತಾಲ್ಲೂಕಿನಾದ್ಯಂತ ನಡೆಯಲಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ಯಶಸ್ವಿಗೊಳಿಸಬೇಕಿದೆ ಎಂದರು.
ನಾಳಿನ ಕೇಂದ್ರ ತೆರೆಯುವ ಸ್ಥಳದ ಕುರಿತು ಮಾಹಿತಿ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯಲು ಸಾರ್ವಜನಿಕರನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ. ಹೆಚ್ಚಿನ ಪ್ರಚಾರದ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿನ ಕೇಂದ್ರದ ಕುರಿತು ಮಾಹಿತಿ ನೀಡಬೇಕು. ಒಟ್ಟಾರೆ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.
ಪುರಸಭೆಯ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಮಾತನಾಡಿ, ಗುರುವಾರದಿಂದ ಆರಂಭವಾಗಲಿರುವ ಲಸಿಕೆ ಅಭಿಯಾನ ಯಾವರೀತಿ ಹಮ್ಮಿಕೊಳ್ಳಬೇಕೆಂಬ ಕುರಿತು ಪುರಸಭೆಯ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಪಟ್ಟಣದ ೨೩ ವಾರ್ಡುಗಳಲ್ಲಿಯೂ ಲಸಿಕೆ ಕೇಂದ್ರ ತೆರೆಯಲಿದ್ದು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ನಾಳೆ ಪಡೆಯುವ ಲಸಿಕೆ ಕಾರ್ಯಕ್ರಮದಲ್ಲಿ ಎರಡನೇ ಡೋಸ್ ಪಡೆಯಲು ಅರ್ಹರಲ್ಲ. ಮುಂದಿನ ೨೩ ನೇ ತಾರೀಖು ಕಳೆದರೆ ಎರಡನೇ ಡೋಸ್‌ಗೆ ಅರ್ಹರಾಗುತ್ತಾರೆ. ನಾಳೆಯಂತೆಯೇ ಎರಡನೇ ಡೋಸ್ ಪಡೆಯಲು ಇದೆ ರೀತಿ ವಾರ್ಡುಗಳಲ್ಲಿ ಲಸಿಕೆ ಕೇಂದ್ರ ತೆರೆಯಬೇಕೆಂದು ಸಲಹೆ ನೀಡಿದರು. ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವೇದಿಕೆಯಲ್ಲಿದ್ದ ಡಾ.ಚಂಪಕಾ ಭರವಸೆ ನೀಡಿದರು.
ಪುರಸಭೆ ಸದಸ್ಯ ಶಾಂತಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯವರು ಅವರಿಗೆ ಬೇಕೆಂದಾಗ ನಮಗೆ ಮಾಹಿತಿ ನೀಡುತ್ತಾರೆ. ಉಳಿದಂತೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇನ್ನುಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದರು.
ಡಾ.ಚಂಪಕಾ ಮಾಹಿತಿ ನೀಡಿ, ೯ ವಾರ್ಡುಗಳಲ್ಲಿ ಕೇಂದ್ರ ಎಲ್ಲಿ ತೆರೆಯುವ ಕುರಿತು ಪೂರ್ವ ಸಿದ್ಧತೆಯಾಗಿದೆ. ಉಳಿದ ವಾರ್ಡುಗಳಲ್ಲಿ ಸಿದ್ದತೆ ಆಗಬೇಕಿದೆ. ಎಲ್ಲಾ ವಾರ್ಡುಗಳಲ್ಲಿ ಶೇ.೧೦೦ ಗುರಿ ಪೂರ್ಣಗೊಳ್ಳಬೇಕಿದೆ. ಲಸಿಕೆಗೆ ಸಂಬಂಧಿಸಿದ ಪರಿಕರಗಳ ಕೊರತೆಯಿಲ್ಲ. ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ತಾ.ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪುರಸಭೆಯ ಸದಸ್ಯರಾದ ಜಮಾಲುದ್ದೀನ್, ಎ.ಆರ್.ಅಶೋಕ್, ಭರತ್, ಅಶೋಕ್, ಶಾಂತಕುಮಾರ್, ತೀರ್ಥಕುಮಾರಿವೆಂಕಟೇಶ್, ರತ್ನಮ್ಮಸತ್ಯನಾರಾಯಣ, ಮೀನಾಕ್ಷಿವೆಂಕಟೇಶ್, ಬಿ.ಎಸ್.ಉಷಾಸತೀಶ್ ಇತರರು ಇದ್ದರು.