ಬೇಲೂರು:
ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ಬ್ರಾಡ್‌ಗೇಜ್ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪಕ್ರಿಯೆ ಕುರಿತು ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ ಹಾಗೂ ರೈಲ್ವೆ ಅಧಿಕಾರಿಗಳು ಪುರಸಭಾ ವ್ಯಾಪ್ತಿಯ ಭೂಸ್ವಾಧೀನಕ್ಕೆ ಒಳಗೊಂಡಂತೆ ಇಂದು ಭೂ ಮಾಲೀಕರ ಸಭೆ ನಡೆಸಿದರು.
ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ದಾಸೋಹ ಸಭಾಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು, ೪\೧ ನೊಟೀಫಿಕೇಷನ್ ಮಾಡಲು ಆರಂಭಿಸಿ ೧೫ ವರ್ಷಗಳಾಗಿವೆ. ವಶಪಡಿಸಿಕೊಂಡ ಭೂಮಿಗೆ ಮಾರ್ಕೆಟ್ ಬೆಲೆಗಿಂತ ಹೆಚ್ಚು ಕೊಡಲಾಗುವುದು. ನಿಮಗೆ ನಾವು ಕೊಡುವ ಪರಿಹಾರ ತೃಪ್ತಿಕರ ಆಗಲಿಲ್ಲ ಎಂದರೆ ನ್ಯಾಯಾಲಯಕ್ಕೂ ಹೋಗಲು ಅವಕಾಶವಿದೆ. ೩ ವರ್ಷದ ಹಿಂದಿನ ದರ ನಿಗಧಿಪಡಿಸಲಾಗುವುದು. ಉದ್ಯಾನವನದಲ್ಲಿ ಮನೆ ನಿರ್ಮಿಸಿದ್ದರೆ, ಆ ಸ್ಥಳವನ್ನು ಪುರಸಭೆಯಿಂದ ಅಗ್ನಿಮೆಂಟ್ ಮಾಡಿಕೊಂಡು ದಾಖಲೆ ನೀಡಬೇಕು. ಪರಿಹಾರಕ್ಕೆ ಪುರಸಭೆಯ ಖಾತೆ ಇದ್ದರೆ ಸಾಕು ಪರಿಹಾರ ನೀಡಲಾಗುವುದು. ಸದ್ಯ ಪರಿಹಾರ ಸಮಿತಿ ರಚಿಸಿ ಕೇಂದ್ರ ಸರ್ಕಾರದ ನಿಯಮಾನುಸಾರ ಪರಿಹಾರದ ಮೊತ್ತ ನೀಡಲಾಗುವುದು ಎಂದು ತಿಳಿಸಿದರು.
ರೈಲ್ವೆ ಭೂಸ್ವಾಧೀನಾಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ನೊಟೀಫಿಕೇಶನ್ ಆಗಿದ್ದು ರಾಜ್ಯಪತ್ರದಲ್ಲೂ ಪ್ರಕಟಗೊಂಡಿದೆ. ಇದೀಗ ಅಂತಿಮಘಟ್ಟದಲ್ಲಿದೆ. ಬೇಲೂರು ಸೇರಿದಂತೆ ೧೨ ಹಳ್ಳಿಗಳ ಭೂಸ್ವಾಧೀನಕ್ಕೆ ಹಾಗೂ ಪುರ‍್ವಸತಿ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪಕ್ರಿಯೆಗಳು ಮುಗಿದಿದೆ. ಪುರಸಭಾ ವ್ಯಾಪ್ತಿಯಲ್ಲಿ ೧೬.೩೯ ಎಕರೆ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿದ್ದು ಪುರಸಭಾ ವ್ಯಾಪ್ತಿಯಲ್ಲಿನ ೨೪೫ ನಿವೇಶನಗಳ ಖಾತೆದಾರರ ಭೂಮಿಯನ್ನು ವಶಕ್ಕೆ ಪಡೆಯುತ್ತಿದ್ದೇವೆ. ನಿವೇಶನಕ್ಕೆ ಹಾಗೂ ಭೂಮಿಗೆ ನ್ಯಾಯಯುತ ಪರಿಹಾರ ದೊರೆಯಲಿದ್ದು ನೇರವಾರಿ ಅಕೌಂಟ್‌ಗೆ ಹಣ ತುಂಬಲಾಗುವುದು. ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ತೆರಳುವ ಮಾರ್ಗದಲ್ಲಿ ಒಟ್ಟು ೨೫೬ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ರೈಲ್ವೆ ಮಾರ್ಗದ ನಕ್ಷೆ ಹಲವು ಬಾರಿ ಬದಲಾವಣೆ ಆಗಿದೆ. ೧೫ ವರ್ಷದಿಂದ ಇದೆ ಸಮಸ್ಯೆ ಉಂಟಾಗಿದ್ದು ಇದರಿಂದ ಈ ಭಾಗದ ನಿವಾಸಿಗಳು ವ್ಯವಹಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಾಲ ಪಡೆಯಲು, ಮಾರಾಟ ಮಾಡಲು, ರಿಪೇರಿ ಮಾಡಿಸಲು ಎಲ್ಲದಕ್ಕೂ ತೊಂದರೆ ಆಗುತ್ತಿದೆ. ತಕ್ಷಣವೇ ಕಾರ್ಯಾರಂಭವಾಗಲಿದೆ.
ಸುರೇಶ್ ಮಾತನಾಡಿ, ಜೆಪಿ.ನಗರದಲ್ಲಿ ವಶಪಡಿಸಿಕೊಂಡಿರುವ ಸ್ಥಳದಲ್ಲಿ ರಸ್ತೆ ಮಾತ್ರ ವಶಪಡಿಸಿಕೊಂಡಿದ್ದು ಮನೆಗೆ ತೆರಳಲು ರಸ್ತೆ ಇಲ್ಲದಂತಾಗಿದೆ. ೨೫ ವರ್ಷದ ಹಿಂದೆ ಲೇಔಟ್ ಮಾಡಿದ ಸಂದರ್ಭ ಪಾರ್ಕ್ ಇದ್ದಂತ ಸ್ಥಳದಲ್ಲಿ ಇದೀಗ ಮನೆ ನಿರ್ಮಿಸಲಾಗಿದ್ದು ಪುರಸಭೆಯಲ್ಲೂ ಖಾತೆ ಆಗಿದೆ. ಇದಕ್ಕೆ ಪರಿಹಾರ ನೀಡಲಾಗುವುದೆ ಎಂಬುದಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮೂಲಧಾಖಲೆ ಇಲ್ಲದಿದ್ದಲ್ಲಿ ಪರಿಹಾರ ದೊರೆಯುವುದಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಪರಿಹಾರದ ಜೊತೆಗೆ ನಿವೇಶನ ನೀಡುವಂತೆ ಈರೇಗೌಡ ಮನವಿ ಮಾಡಿದರು. ರೈಲ್ವೆ ಯೋಜನೆ ಮಂದಗತಿಯಲ್ಲಿ ಸಾಗುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವ ಕುರಿತು ಭೂ ಮಾಲೀಕರು ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಅಧಿಕಾರಿ ಅಪ್ಪಾನಾಯಕ್, ಪುರಸಭಾ ಮುಖ್ಯಾಧಿಕಾರಿ ಸುಜಯಕುಮಾರ್ ಇದ್ದರು.
೨೫ ಬಿಎಲ್‌ಆರ್‌ಪಿ-೧
ಬೇಲೂರಿನಲ್ಲಿ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ ಭೂ ಮಾಲೀಕರ ಸಭೆ ನಡೆಸಿದರು. ಭೂ ಮಾಲೀಕರು ಪಾಲ್ಗೊಂಡಿದ್ದರು