ಹೊಸ ಮುಖ ರಘು ಗೌಡ ಅವರಿಗೆ ಮಣೆ ಹಾಕಿದ ಒಕ್ಕಲಿಗ ಸಂಘದ ಸದಸ್ಯರು

ಹ್ಯಾಟ್ರಿಕ್ ಸಾಧಿಸಿದ ಶಾಸಕ ಸಿಎನ್ ಬಾಲಕೃಷ್ಣ ಹಾಗೂ ಬಾಗೂರು ಮಂಜೇಗೌಡ

ಹೊಸ ಮುಖ ರಘು ಗೌಡ ಅವರಿಗೆ ಮಣೆ ಹಾಕಿದ ಒಕ್ಕಲಿಗ ಸಂಘದ ಸದಸ್ಯರು

ಹಾಸನ: ಹಾಸನದಲ್ಲಿ ನಡೆದಂತಹ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು ಶಾಸಕ ಬಾಲಕೃಷ್ಣ ಹಾಗೂ ಬಾಗೂರು ಮಂಜೇಗೌಡ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ‌‌‌.
ನಿರೀಕ್ಷೆಯಂತೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿಎನ್ ಬಾಲಕೃಷ್ಣ 32311 ಮತಗಳನ್ನು ಪಡೆದು ಪ್ರಥಮ ಸ್ಥಾನಗಳಿಸಿದರೆ. ಎರಡನೇ ಸ್ಥಾನದಲ್ಲಿ ಹಾಸನದ ಯುವ ಮುಖಂಡ ಎಸ್ ಎಸ್ ರಘುಗೌಡ 30555 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಮೂರನೇ ಸ್ಥಾನಕ್ಕೆ ಬಾಗೂರು ಮಂಜೇಗೌಡ 20388 ಮತಗಳನ್ನು ಪಡೆದರೆ. ಚನ್ನರಾಯಪಟ್ಟಣದ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಅವರ ಅಣ್ಣನ ಮಗ ಸಿ ಎಸ್ ಯುವರಾಜ್ 17895 ಮತಗಳನ್ನು ಪಡೆದರು ಅಂತಿಮ ಫಲಿತಾಂಶ ಹೊರಬೀಳುವ ಕೊನೆಯ ಗಳಿಗೆವರೆಗೂ  ಸಿಎನ್ ಬಾಲಕೃಷ್ಣ ಅವರು ಮುನ್ನಡೆ ಕಾಯ್ದುಕೊಂಡರು‌.

 ಶಾಸಕ ಬಾಲಕೃಷ್ಣ ಹ್ಯಾಟ್ರಿಕ್:
 
ಶಾಸಕ ಸಿ.ಎನ್‌. ಬಾಲಕೃಷ್ಣ ಅವರು ಸತತ ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ . ಅಂತೆಯೇ ಬಾಗೂರು ಮಂಜೇಗೌಡ ಅವರು ಸಹ ಮೂರನೇ ಬಾರಿ ಸ್ಪರ್ಧೆ ಮಾಡಿದ್ದು ಗೆಲುವು ಸಾಧಿಸಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹತ್ತಿರವಾಗಿದ್ದ ಸಿಎನ್ ಬಾಲಕೃಷ್ಣ ಅವರು ಒಕ್ಕಲಿಗರ ಸಂಘದ ಸದಸ್ಯತ್ವವನ್ನು ನೊಂದಾಣಿ ಮಾಡಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ಅವರೊಂದಿಗೆ ಸ್ಪರ್ಧೆ ಮಾಡಿದಂತಹ ರಘು ಗೌಡ ಅವರು ಬಹುತೇಕ ತಾಲೂಕುಗಳಲ್ಲಿ ಬಾಲಕೃಷ್ಣ ಅವರೊಂದಿಗೆ ಮತಗಳನ್ನು ಹಂಚಿಕೊಂಡು ಸಂಘಕ್ಕೆ ಆಯ್ಕೆಯಾಗಿದ್ದಾರೆ.

ಬಾಗೂರು ಮಂಜೇಗೌಡ ಅವರು ಕಳೆದ ಬಾರಿ ಪ್ರಥಮ ಸ್ಥಾನ ಗಳಿಸಿದ್ದರು ಆದರೆ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ .  ಚನ್ನರಾಯಪಟ್ಟಣ ಹಾಗೂ ಹಾಸನ ಸೇರಿದಂತೆ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸ್ಪಂದನೆ ಹಾಗೂ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ಇರುವುದು ಇದಕ್ಕೆ ಕಾರಣ ಎಂಬ ಮಾತು ಸಹ ಕೇಳಿಬಂದಿದೆ.
 ಒಟ್ಟು ಹನ್ನೊಂದು ಮಂದಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಇದೀಗ ಮೂರು ಮಂದಿ ನಿರ್ದೇಶಕರ ಆಯ್ಕೆ ನಡೆದಿದ್ದು ಉಳಿದ ಸ್ಪರ್ಧಿಗಳಲ್ಲಿ ಎಂ. ಶಂಕರ್ 11607 ಹಾಗೂ ವಕೀಲರಾದ ಜೆಪಿ ಶೇಖರ್ ಅವರು 2819 , ಡಾ.ರವಿಶಂಕರ್ ಅವರು  1166 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 

ಒಕ್ಕಲಿಗ ಸಂಘದ ಚುನಾವಣೆಯಲ್ಲೂ ಎಡವಿದ ಶಂಕರ್:

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ ಚನ್ನರಾಯಪಟ್ಟಣದ ಎಂ.ಶಂಕರ್ ಅವರು ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದರೆ ಈ ಚುನಾವಣೆಯಲ್ಲೂ ಸಹ ಕೇವಲ 11607  ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದಾರೆ ಈ ಮೂಲಕ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಸತತ ಎರಡನೇ ಸೋಲು ಕಂಡಿದ್ದಾರೆ.

ಹೊಸ ಮುಖಗಳ ಸ್ಪರ್ಧೆ:

ರಾಜ್ಯ ಒಕ್ಕಲಿಗ  ಸಂಘದ ಚುನಾವಣೆಯಲ್ಲಿ ಹಾಸನದ ಯುವ ಮುಖಂಡ ರಘು ಗೌಡ ಅವರು ಬಾಲಕೃಷ್ಣ ಅವರೊಂದಿಗೆ ಸಂಘಟಿತರಾಗಿ ಸ್ಪರ್ಧೆ ಮಾಡಿದ್ದರು ಹಾಗೂ ಬಾಲಕೃಷ್ಣ ಅವರೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಹಾಗೂ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಅವರ ಅಣ್ಣನ ಮಗನಾದ ಯುವರಾಜ್ ಅವರು ಸಹ ಪೈಪೋಟಿ ನೀಡಿದ್ದರು ಬಾಗೂರು ಮಂಜೇಗೌಡರ ವಿರುದ್ಧ 2493 ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ.

ಎಲ್ಲ ಮತಗಟ್ಟೆಯಲ್ಲಿಯೂ ಕ್ರಮ ಸಂಖ್ಯೆ 1-3-5 ಪ್ರತಿಧ್ವನಿ :

ಇಂದು ನಡೆದ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಫಲಿತಾಂಶದ ಮತಎಣಿಕೆ ಕೇಂದ್ರದಲ್ಲಿ ಬಹುತೇಕ ಮತದಾರರು 1-3-5 ಕ್ರಮ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸಾಂಘಿಕ ಪ್ರದರ್ಶನವನ್ನು ನೀಡಿದ್ದಾರೆ .

ಒಂದನೇ ಕ್ರಮಾಂಕ ಸದಸ್ಯರಾದ ಸಿಎನ್ ಬಾಲಕೃಷ್ಣ ಮೂರನೇ ಕ್ರಮ ಸಂಖ್ಯೆಯ ಬಾಗೂರು ಮಂಜೇಗೌಡ ಹಾಗೂ 5ನೇ ಕ್ರಮ ಸಂಖ್ಯೆಯ ರಘು ಗೌಡ ಅವರಿಗೆ ಜಿಲ್ಲೆಯ ಬಹುತೇಕ ಒಕ್ಕಲಿಗ ಸಮುದಾಯದ ಮತದಾರರು ಮತ ನೀಡಿರುವುದು ವಿಶೇಷವಾಗಿತ್ತು.

Post a Comment

Previous Post Next Post