ಬೇಲೂರು :
ಕಳೆದ ಕೆಲ ದಿನಗಳಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳ ಹಿಜಾಬ್, ಬುರ್ಕಾ ಹಗ್ಗ ಜಗ್ಗಾಟಕ್ಕೆ ತಾತ್ಕಾಲಿಕವಾಗಿ ತೆರೆಬಿದ್ದಿದ್ದು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಬರಲು ಅವಕಾಶ ಲಭಿಸಿದೆ.
ಶಾಲಾಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡು, ತಾತ್ಕಾಲಿಕವಾಗಿ ವಿದ್ಯಾರ್ಥಿಗಳು ಶಾಲಾ ಸಮವಸ್ತçದೊಂದಿಗೆ ಸರ್ಕಾರದಿಂದ ವಿತರಿಸಿರುವ ವೇಲ್ ಧರಿಸಿ ಶಾಲೆಗೆ ಬರಲು ಅವಕಾಶ ನೀಡಿದೆ.
| ಬೇಲೂರಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಮನೆಗೆ ವಾಪಸ್ ಕಳುಹಿಸಲಾಯಿತು |
ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಕೆಲ ದಿನಗಳಿಂದ ಹಿಜಾಬ್ ಮತ್ತು ಬುರ್ಕಾ ಧರಿಸಿ ತರಗತಿ ಪ್ರವೇಶಕ್ಕೆ ಮುಂದಾಗಿದ್ದರು. ನಂತರ ನ್ಯಾಯಾಲಯದ ಆದೇಶದವರೆಗೆ ಶಾಲೆಗೆ ಬರುವುದಿಲ್ಲ ಎಂದು ಮಂಗಳವಾರ ಪ್ರತಿಭಟಿಸಿ ಮನೆಗೆ ಹೋದವರು ಪುನ: ಶುಕ್ರವಾರ ಪೋಷಕರೊಂದಿಗೆ ಆಗಮಿಸಿ ನಮಗೆ ಸಮವಸ್ತ್ರದೊಂದಿಗೆ ವೇಲ್ ಧರಿಸಲು ಅವಕಾಶ ಕೊಡಿ ಎಂದು ಒತ್ತಾಯಿಸಿ ಪ್ರತಿಭಟಿಸಿ ಮನೆಗೆ ತೆರಳಿದ್ದರು.
ಈ ಹಿನ್ನೆಲೆಯಲ್ಲಿ ಉಪ ಪ್ರಶಂಶುಪಾಲ ಚಂದ್ರಶೇಖರ್, ಶನಿವಾರ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ಕರೆದು ಚರ್ಚಿಸಿ ಇಲಾಖೆ ಮೇಲಾಧಿಕಾರಿಗಳ ಆದೇಶದಂತೆ ಸಮವಸ್ತ್ರದೊಂದಿಗೆ ಸರ್ಕಾರದಿಂದ ವಿತರಿಸಿರುವ ವೇಲ್ ಮಾತ್ರ ವಿದ್ಯಾರ್ಥಿಗಳು ಬಳಸಬಹುದು ಎಂದು ತೀರ್ಮಾನಿಸಿದರು.
ಸೋಮವಾರದಿಂದ ಕಡ್ಡಾಯವಾಗಿ ಸಮವಸ್ತ್ರದೊಂದಿಗೆ ಸರ್ಕಾರದಿಂದ ವಿತರಿಸಿರುವ ವೇಲ್ ಧರಿಸಿ ಬರಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕು ಹಿಜಾಬ್ ಮತ್ತು ಬುರ್ಕಾ ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಪೋಷಕರ ಸಮ್ಮುಖದಲ್ಲಿ ತೀರ್ಮಾನಿಸಿದ್ದರಿಂದ ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದಿದ್ದ ವಿದ್ಯಾರ್ಥಿಗಳು ವಾಪಸ್ ಪೋಷಕರೊಂದಿಗೆ ಮನೆಗೆ ತೆರಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಶಾಲಾಭಿವೃದ್ಧಿ ಸಮಿತಿ ಸಭೆಯ ತೀರ್ಮಾನದಂತೆ ವಿದ್ಯಾರ್ಥಿಗಳು ಸೋಮವಾರದಿಂದ ಸಮವಸ್ತ್ರದೊಂದಿಗೆ ಸರ್ಕಾರದಿಂದ ವಿತರಿಸಿರುವ ವೇಲ್ ಮಾತ್ರ ಧರಿಸಿ ಬರಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಿಜಾಬ್ ಮತ್ತು ಬುರ್ಕಾ ಧರಿಸಿ ಬಂದವರಿಗೆ ತರಗತಿಗೆ ಸೇರಿಸುವುದಿಲ್ಲ. ಇದಕ್ಕೆ ಅವರ ಪೋಷಕರು ಒಪ್ಪಿದ್ದಾರೆ ಎಂದು ತಿಳಿಸಿದರು.