ಅರಸೀಕೆರೆ: ಖರಾಬು ಜಾಗ, ಕೆರೆ, ಸ್ಮಶಾನ ಜಾಗಗಳನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಬೇಕು, ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಹಕರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಾಕೀತು ಮಾಡಿದರು.
ತಾಲ್ಲೂಕಿನ ಗಂಡಸಿ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಬುಧವಾರ ರಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಮಶಾನ ಜಾಗ ಹಾಗೂ ಕೆಲವರು ನಿವೇಶನಗಳನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದನ್ನು ಶೀಘ್ರವೇ ತೆರವುಗೊಳಿಸಬೇಕು. ಇದೊಂದು ಪ್ರಮುಖವಾದ ಸಾರ್ವಜನಿಕ ಸಭೆ ಆಗಿರುವುದರಿಂದ ಗ್ರಾಮ ಪಂಚಾಯಿತಿವಾರು ಸಭೆಗಳನ್ನು ನಡೆಸುತ್ತಿದ್ದೇನೆ, ಇದರಿಂದ ಸಾಮಾನ್ಯ ಜನರ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದರೆ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಬಾಗೇಶಪುರ ಸಹಕಾರ ಸಂಘದಲ್ಲಿ ಅಕ್ರಮ ನಡೆದಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರನ್ನು ಪದೇ ಪದೇ ಕಚೇರಿಗಳಿಗೆ ಅಲೆಸುವುದನ್ನು ಬಿಟ್ಟು ತ್ವರಿತ ವಿಲೇವಾರಿಗೆ ಮುಂದಾಗಬೇಕು ಎಂದರು.
ರಂಗೇನಹಳ್ಳಿ ಗ್ರಾಮದಲ್ಲಿ ಸ್ಮಶಾನ ಒತ್ತುವರಿ ತೆರವುಗೊಳಿಸಿ. ರಂಗಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹತ್ತಿರದ ಅರಸೀಕೆರೆ ಅಥವಾ ಹಾಸನ ನಗರಗಳಿಗೆ ನಿತ್ಯ ಕೆಆರ್‌ಟಿಸಿ ಬಸ್ಸಿನಲ್ಲಿ ನಿತ್ಯ ಸಂಚರಿಸಬೇಕು, ಆದರೆ ರಂಗಾಪುರ ನೀರಗುಂದ ಬಸವಾಘಟ್ಟ, ದುದ್ದ ಹಾಸನ ಮಾರ್ಗಗಳಲ್ಲಿ ಸಮರ್ಪಕವಾಗಿ ಬಸ್‌ಗಳೇ ಬಾರದಿರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಓಡಾಡಲು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಹಾಲಿನ ವಾಹನಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಸಂಚರಿಸುವಂತ್ತಾಗಬೇಕು ಎಂಬ ಬೇಡಿಕೆ ಕೇಳಿಬಂತು.
ಇದಕ್ಕೆ ಸಂಬಂಧಿಸಿದಂತೆ ಸಂಸದರು ಪ್ರತಿಕ್ರಿಯಿಸಿ, ಬಸ್ಸಿನ ಅವಶ್ಯಕತೆ ಇದೆ ಎಂದು ಜೂನ್ ತಿಂಗಳಲ್ಲೇ ಸಾರ್ವಜನಿಕರು ಮನವಿ ಸಲ್ಲಿಸಿದ್ದರೂ ಇನ್ನೂ ಏಕೆ ಬಸ್ ಬಿಡುವ ವ್ಯವಸ್ಥೆ ಮಾಡಿಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಕೂಡಲೇ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗೆ ಸೂಚಿಸಿದರು.
ಬಾಗೇಶಪುರ ಗ್ರಾಮದಲ್ಲಿರುವ ಸಹಕಾರ ಸಂಘದಲ್ಲಿ ಪದೇ ಪದೇ ಪಡೆದವರಿಗೇ ಸಾಲ ಸೌಲಭ್ಯ ಸಿಗುತ್ತಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಸಾಲ ಸೌಲಭ್ಯ ಮಂಜೂರು ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂತು. ಈ ನಿಟ್ಟಿನಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಸಂಸದರು ಸೂಚಿಸಿದರು.
ರಾಮಜೀಹಳ್ಳಿ ಗ್ರಾಮದ ಕೆರೆ ಶಿಥಿಲವಾಗಿದೆ ಹಾಗೂ ಸಿದ್ದಲಿಂಗಕೆರೆ ದುರಸ್ತಿ ಕಾರ್ಯವನ್ನು ಶೀಘ್ರವೇ ಕೈಗೊಳ್ಳದಿದ್ದರೆ ಅಪಾಯ ಎದುರಾಗಲಿದೆ, ಹೆಚ್ಚು ಶಿಥಿಲವಾಗಿದ್ದು ಕೆರೆಯ ನೀರು ಪಕ್ಕದ ಗದ್ದೆಗಳಲ್ಲಿ ಹರಿಯುತ್ತಿದೆ ಇದು ಬೆಳೆ ಹಾನಿಗೆ ಎಡೆಮಾಡಿಕೊಡುತ್ತಿದೆ, ಶೀಘ್ರವೇ ಕೆರೆ ದುರಸ್ತಿ ಮಾಡಾಕೊಡುವಂತೆ ಜನರು ಆಗ್ರಹಿಸಿದರು.
ರಂಗೇನಹಳ್ಳಿ ಗ್ರಾಮದ ಕುಮಾರ್ ಅವರು, ಮನೆ ನಿರ್ಮಿಸಿ ಹತ್ತು ವರ್ಷಗಳಾದರೂ ನನ್ನ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಅಹವಾಲು ಸಲ್ಲಿಸಿದರು, ಇದಕ್ಕೆ ಸಂಸದರು ಉತ್ತರಿಸಿ, ಆದಷ್ಟು ಶೀಘ್ರ ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಓಂಕಾರಪ್ಪ, ಸರ್ಕಾರಿ ಇಲಾಖೆಗಳ ಕೆಲವು ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ರಂಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಉಪಸ್ಥಿತರಿದ್ದರು.
