ಬರ್ಭರವಾಗಿ ಹತ್ಯೆಗೀಡಾದ ಜೆಡಿಎಸ್ ನಗರಪಾಲಿಕೆ ಸದಸ್ಯ ಪ್ರಶಾಂತ್ : ಹಾಸನದಲ್ಲಿ ಸ್ವಯಂಪ್ರೇರಿತ ಬಂದ್

ಹಾಸನ: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಬರ್ಭರವಾಗಿ ಹತ್ಯೆಗೀಡಾದ ಜೆಡಿಎಸ್ ನಗರಪಾಲಿಕೆ ಸದಸ್ಯ ಪ್ರಶಾಂತ್ ಶವ ಹಾಸನದ ಶವಾಗಾರದಲ್ಲಿಡಲಾಗಿದ್ದು ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.

ಪ್ರಶಾಂತ್ ನಾಗರಾಜ್ (42) ಅವರು ಲಕ್ಷ್ಮಿ ಪುರ ಬಡಾವಣೆಯ ಜವೇನಹಳ್ಳಿ ಮಠದ ಬಳಿ ದ್ವಿಚಕ್ರ ವಾಹನದಲ್ಲಿ ಮನೆಕಡೆಗೆ ಹೋಗುವಾಗ ಹಿಂದಿನಿಂದ ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಎಸ್ಪಿ ನಂದಿನಿ, ಪೆನ್ಷನ್ ಮೊಹಲ್ಲಾ ಪೊಲೀಸರು ಸೇರಿದಂತೆ ಶ್ವಾನದಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳ ಪತ್ತೆಗೆ 3 ತಂಡಗಳನ್ನು ರಚಿಸಲಾಗಿದ್ದು, ಭದ್ರತೆಗಾಗಿ ಇತರೆ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ ಎಂದು ಹಾಸನ ಎಸ್ಪಿ ಆರ್.ಶ್ರೀನಿವಾಸಗೌಡ ತಿಳಿಸಿದ್ದಾರೆ.

ದುಷ್ಕರ್ಮಿಗಳು ತಾವು ತಂದಿದ್ದ ಮಾರಕಾಸ್ತ್ರಗಳಿಂದ ನಗರಸಭಾ ಸದಸ್ಯ ಪ್ರಶಾಂತ್ ಎದೆಗೆ ಹಾಗೂ ಎಡಗೈ ತುಂಡರಿಸಿದ್ದು, ಅಲ್ಲದೆ ದೇಹದ ನಾನಾ ಭಾಗಗಳಿಗೆ ಮನಸ್ಸು ಕಿಚ್ಚು ಹಚ್ಚಿದ್ದಾರೆ ಇನ್ನು ಸ್ಥಳದಲ್ಲಿ ಪ್ರಶಾಂತ್ ಸ್ನೇಹಿತರು ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಸುತ್ತಮುತ್ತಲ ಬಡಾವಣೆಯ ನಾಗರಿಕರು ಜಮಾಯಿಸಿದ್ದರು. ಮೇಲ್ನೋಟಕ್ಕೆ ಇದೊಂದು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಮುಂಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸ್ವಯಂಪ್ರೇರಿತ ಬಂದ್: ಸದ್ಯ ಹಾಸನದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಹಾಸನ ನಗರದಲ್ಲಿ ಹಣ್ಣು-ತರಕಾರಿ ಅಂಗಡಿಯವರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

ಮಾಜಿ ಸಚಿವ ಹೆಚ್ ಡಿ ರೇವಣ್ಣ ಗರಂ: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು ಕೊಲೆ ಹಿನ್ನೆಲೆಯಲ್ಲಿ ಶವ ಇರಿಸಿರುವ ಹಾಸನ ಜಿಲ್ಲಾಸ್ಪತ್ರೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ ವೈ ಎಸ್ಪಿ ಉದಯ್ ಭಾಸ್ಕರ್ ಇರಬಹುದು, ರೇಣುಕಾ ಪ್ರಸಾದ್ ಇರಬಹುದು, ನಗರ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ರೌಡಿಗಳ ಜೊತೆ ಸೇರಿಕೊಂಡು ದಿನಕ್ಕೆ ಲಕ್ಷ ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆ.

ಹಾಸನ ನಗರದಲ್ಲಿ ಮಟ್ಕಾ ದಂಧೆ, ಮರಳು ದಂಧೆ ಮಿತಿ ಮೀರಿದೆ. ಪೊಲೀಸರೇ ನಿಂತ್ಕೊಂಡು ಮಟ್ಕಾ ಆಡಿಸುತ್ತಿದ್ದಾರೆ, ಬೇಕಿದ್ದರೆ ದಾಖಲೆ ಒದಗಿಸುತ್ತೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Post a Comment

Previous Post Next Post