ಇಲ್ಲಿನ ಮೀನುಗಾರಿಕೆ ಕಚೇರಿಯಲ್ಲಿ ಡಿ.ದರ್ಜೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಹುಲಿಯಪ್ಪ (೫೦) ಮೃತಪಟ್ಟಿದ್ದು ಇದಕ್ಕೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಕಾಸ್ ಕಾರಣ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಮೃತದೇಹದೊಂದಿಗೆ ಮೀನುಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಪಟ್ಟಣದ ಮೀನುಗಾರಿಕೆ ಕಚೇರಿ ಸಮೀಪವೇ ಇರುವ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಹುಲಿಯಪ್ಪ ಮೃತಪಟ್ಟಿದ್ದಾರೆ. ವಿಷಯ ತಿಳಿದ ಮೃತನ ಪತ್ನಿ, ಮಕ್ಕಳು ಹಾಗೂ ಸಂಬAಧಿಕರು ಹುಲಿಯಪ್ಪನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದಿದ್ದ ಹುಲಿಯಪ್ಪ ಸಾವಿಗೀಡಾಗಿದ್ದಾರೆ ಎಂದು ದೂರಿದರು. ಈ ಸಂದರ್ಭ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ, ೫ ವರ್ಷದಿಂದ ಹುಲಿಯಪ್ಪ ಮೀನುಗಾರಿಕೆ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮದ್ಯಪಾನ ಮಾಡಿದ್ದನೆಂಬ ಕಾರಣ ನೀಡಿ, ಕೆಲಸದಿಂದ ತೆಗೆದಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಮಾಡಲಾಗದೆ ಮನನೊಂದು ಕುಡಿತದ ಚಟಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ.
ಹುಲಿಯಪ್ಪ ಅಧಿಕಾರಿಗಳಲ್ಲಿ ಎಷ್ಟೇ ಮನವಿ ಮಾಡಿದರೂ ಹುಲಿಯಪ್ಪನನ್ನು ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪರಿಹಾರವಾಗಿ ೧೦ ಲಕ್ಷರೂ. ನೀಡಬೇಕು, ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಪಿಐ ಯೋಗೇಶ್, ಪಿಎಸ್‌ಐ ಶಿವಾನಂದ ಜಿ.ಪಾಟೀಲ್ ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ಮೀನುಗಾರಿಕೆ ಸಹಾಯಕ ನಿರ್ದೇಶಕ ವಿಕಾಸ್, ಹುಲಿಯಪ್ಪ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರೇ ಕೆಲಸ ಬಿಟ್ಟಿದ್ದರು. ಪುನಃ ಕುಟುಂಬಸ್ಥರು ಮನವಿ ಮಾಡಿದ್ದರಿಂದ ಪುನಃ ನೇಮಕ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಜುಂಜಯ್ಯ, ಲಕ್ಷಿö್ಮÃನಾರಾಯಣ, ಹುಲಿಕೆರೆ ರಮೇಶ್, ಶೆಟ್ಟಿಹಳ್ಳಿ ರಂಗನಾಥ್, ಪುಟ್ಟಸ್ವಾಮಿ, ಹುಲ್ಲೇನಹಳ್ಳಿ ರಾಜು ಇತರರು ಇದ್ದರು.
ವರದಿ: ಅನಂತರಾಜೇಅರಸು, ಬೇಲೂರು
Tags
ಬೇಲೂರು