ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

  ಹಾಸನ:- ಪದವಿ, ಇಂಜಿನಿಯರಿAಗ್, ಡಿಪ್ಲೊಮಾ, ಐಟಿಐ, ಮೆಡಿಕಲ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಬೇಕೆಂದು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಕೆಲ ಸಮಯ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಎಐಡಿಎಸ್‌ಒನ ಜಿಲ್ಲಾ ಸಂಚಾಲಕ ಸುಭಾಷ್, ರಾಜ್ಯದ ಎರಡನೇ ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ಅವರ ತರಗತಿಗಳು ನವೆಂಬರ್‌ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸಿಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಅಂದರೆ, ನವೆಂಬರ್‌ನಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್ ನವರೆಗೂ, ಡಿಸೆಂಬರ್‌ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟಂಬರ್‌ವರೆಗೂ ಉಚಿತವಾಗಿ ಓಡಾಡಬಹುದು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಏಕಾಏಕಿ ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್ ಪಾಸಿನ ಅವಧಿಯು ಕೊನೆಗೊಳ್ಳಲಿರುವುದರಿಂದ ಮುಂದಿನ ತಿಂಗಳಿನಿAದ ಹಣ ಪಾವತಿಸಿ ಓಡಾಡಬೇಕು ಎಂದು ಹೇಳಿದೆ. ನಿಗಮದ ಈ ನಿರ್ಧಾರವನ್ನು ಎಐಡಿಎಸ್‌ಒ ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಹಲವು ವರ್ಷಗಳ ಹೋರಾಟದ ಫಲವಾಗಿ ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ಅನ್ನು ಪಡೆದುಕೊಂಡಿದ್ದೇವೆ. ವಾಸ್ತವವಾಗಿ, ನಮ್ಮ ಹೋರಾಟ ಉಚಿತ ಪಾಸ್ ನೀಡಬೇಕು ಎಂಬುದೇ ಆಗಿದೆ. ಹೀಗಿರುವಾಗ, ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ, ಮಾನ್ಯತೆ ರದ್ದಾಗಿದೆ ದುಡ್ಡು ಕೊಟ್ಟು ಓಡಾಡಬೇಕು ಎಂಬುದು ಅತ್ಯಂತ ವಿದ್ಯಾರ್ಥಿ ವಿರೋಧಿ ಮತ್ತು ಅಪ್ರಜಾತಂತ್ರಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಈಗಾಗಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ವಿದ್ಯಾರ್ಥಿ ಬಸ್ ಪಾಸಿನ ಅವಧಿಯನ್ನು ಆಗಸ್ಟ್ ನವರೆಗೆ ವಿಸ್ತರಣೆ ಮಾಡಿದೆ. ಇದನ್ನೇ ಇತರೆ ಜಿಲ್ಲಾ ಸಾರಿಗೆ ಸಂಸ್ಥೆಗಳು ಅನುಸರಿಸಬೇಕು ಮತ್ತು ರಾಜ್ಯ ಸಾರಿಗೆ ಸಹ, ವಿದ್ಯಾರ್ಥಿಗಳು ಪ್ರಯಾಣ ಮಾಡಲು ಅನುಕೂಲವಾಗುವಂತೆ ಪಾಸಿನ ಅವಧಿ ವಿಸ್ತರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
 ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಸಹ ಸಂಚಾಲಕರಾದ ಚೈತ್ರ, ಪದಾಧಿಕಾರಿಗಳಾದ ಗಾಯತ್ರಿ ಸುಷ್ಮಾ, ವಿದ್ಯಾರ್ಥಿಗಳಾದ ಅಂಜಲಿ ,ಮದನ್, ಸಂಜಯ್, ಅಮರ್ಜಿತ್, ಕಿರಣ್, ಗುರುದೇವ, ಮನು, ಪ್ರೀತಮ್, ದರ್ಶನ್, ಅಭಿ ಮುಂತಾದವರು ಪಾಲ್ಗೊಂಡಿದ್ದರು.

Post a Comment

Previous Post Next Post