ಹಾಸನ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ಅರ್ಚನಾ ಸೋಮವಾರ ಅಧಿಕಾರ ವಹಿಸಿಕೊಂಡರು.
ಮೂಲತಃ ಮೈಸೂರು ಜಿಲ್ಲೆಯವರಾದ ಇವರು, 1999 ಕೆಎಎಸ್ ಪಾಸ್ ಮಾಡುವ ಮೂಲಕ ಆಡಳಿತ ಸೇವೆಗೆ ಸೇರಿದ್ದರು. ದಶಕಗಳ ನಂತರ 2012 ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಅಲ್ಲಿಂದ ಬೆಂಗಳೂರು ನಗರ ಜಿಪಂ ನಲ್ಲಿ ಸಿಇಒ ಆಗಿ ಕೆಲಸ ಮಾಡಿ ಬಳಿಕ ರಾಮನಗರ ಜಿಲ್ಲಾ ಡಿಸಿಯಾಗಿ ನಿಯೋಜನೆಗೊಂಡಿದ್ದರು. ಕಳೆದ 10 ತಿಂಗಳಿAದ ಬೆಂಗಳೂರಿನಲ್ಲಿ ಪೌರಾಡಳಿತ ಇಲಾಖೆ ನಿರ್ದೇಶಕರಾಗಿ, ಇದೀಗ ಮೊದಲ ಬಾರಿಗೆ ಹಾಸನ ಡಿಸಿಯಾಗಿ ನೇಮಕವಾಗಿದ್ದಾರೆ.
ಸಮಸ್ಯೆ-ಸವಾಲು:
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆರಾಯ ಅಬ್ಬರಿಸಿದ್ದರಿಂದ ನೂರಾರು ಕೋಟಿಯಷ್ಟು ಬೆಲೆ-ಆಸ್ತಿಪಾಸ್ತಿ ಹಾನಿಯಾಗಿದೆ. ರಸ್ತೆಗಳು ಹಾಳಾಗಿವೆ. ಹಿಂದಿನ ಡಿಸಿ ಅವರೇ ಮಾಹಿತಿ ನೀಡಿದಂತೆ 450 ಕೋಟಿ ರೂ. ನಷ್ಟವಾಗಿದೆ. ಕಾಫಿ ಬೆಳೆಗಾರರೂ ಕಂಗಾಲಾಗಿದ್ದಾರೆ.
ಇದಕ್ಕೆ ಸರ್ಕಾರದ ಕಡೆಯಿಂದ ನಿರೀಕ್ಷಿತ ಪ್ರಮಾಣದ ಪರಿಹಾರ ಬಂದಿಲ್ಲ. ಇದೇ ಕಾರಣಕ್ಕೆ ವಿಪಕ್ಷ ಶಾಸಕರು, ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ಈ ಸನ್ನಿವೇಶ ಸಂಭಾಳಿಸುವ ಹೊಣೆಗಾರಿಕೆ ಹೊಸ ಡಿಸಿ ಮುಂದಿದೆ.
ಇನ್ನು ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹಿಂದೆAದಿಗಿAತಲೂ ಮಿತಿ ಮೀರಿದ್ದು, ನಿತ್ಯವೂ ಬೆಳೆಹಾನಿ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಈ ಗೋಳನ್ನು ಕೊನೆಗಾಣಿಸಿ ಎಂದು ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ,ಸರ್ಕಾರಗಳ ಕಡೆಯಿಂದ ಬಾಯಿ ಮಾತಿನ ಭರವಸೆ ಹೊರತುಪಡಿಸಿ ಉಳಿದ್ಯಾವ ಪರಿಹಾರ ಮಾರ್ಗ ಕಾಣಿಸಿಲ್ಲ. ಮಲೆನಾಡು ಭಾಗದ ಜನರ ಸಿಟ್ಟು ಶಮನ ಮಾಡಿ, ಜ್ವಲಂತ ಸಮಸ್ಯೆಗೆ ಪರಿಹಾರ ಕಂಡು ಹಿಡಿಯವ ನಿಟ್ಟಿನಲ್ಲಿ ಡಿಸಿ ಅವರ ಕಾರ್ಯನಿರ್ವಹಣೆ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇದು ಚುನಾವಣಾ ವರ್ಷ:
ಹೇಳಿ ಕೇಳಿ ಇದು ಚುನಾವಣಾ ವರ್ಷ. ವಿಧಾನಸಭಾ ಚುನಾವಣೆಗೆ
ಕೇವಲ ಏಳೆಂಟು ತಿಂಗಳು ಮಾತ್ರ ಬಾಕಿ ಇವೆ. ಎಲೆಕ್ಷನ್ ವೇಳೆ ಜಿಲ್ಲೆಯಲ್ಲಿ ಒಂದಲ್ಲ, ಒಂದು ರೀತಿಯ ರಾಜಕೀಯ ಮೇಲಾಟ, ಪೈಪೋಟಿ, ಜಿದ್ದಾಜಿದ್ದಿ ನಡೆಯುವುದರಿಂದ ಡಿಸಿ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ.
ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಕಾರಣಕ್ಕೆ ಮೇಲಿಂದ ಮೇಲೆ ಜಿಲ್ಲಾಧಿಕಾರಿಗಳನ್ನು ವರ್ಗ ಮಾಡಲಾಗಿತ್ತು. ರೋಣಿ ಸಿಂಧೂರಿ, ರಂದೀಪ್, ಪ್ರಿಯಾಂಕ ಮೇರಿ ಫ್ರಾನ್ಸಿನ್ಸ್, ಜಾಫರ್ ಸೇರಿ ಕೆಲವೇ ತಿಂಗಳ ಅಂತರದಲ್ಲಿ ಮರ್ನಾಲ್ಕು ಮಂದಿ ಬದಲಾವಣೆಯಾಗಿದ್ದರು. ಚುನಾವಣೆ ವೇಳೆ ದಿನ ಬೆಳಗಾಗುವುದರೊಳಗೆ ಜಿಲ್ಲೆಯ ರಾಜಕೀಯ ಒಂದಲ್ಲ ಒಂದು ತಿರುವು ಪಡೆದುಕೊಳ್ಳುವುದು ಹಾಸನದ ಜಾಯಮಾನ ಆಗಿರುವುದರಿಂದ ಇಂಥ ಪರಿಸ್ಥಿತಿಯನ್ನು ಹೊಸ ಡಿಸಿ ಮತ್ತು ಇತ್ತೀಚೆಗಷ್ಟೇ ಜಿಲ್ಲೆಗೆ ಆಗಮಿಸಿರುವ ನೂತನ ಎಸ್ಪಿ ಹರಿರಾಂ ಶಂಕರ್ ಹೇಗೆ ನಿಭಾಯಿಸುವರು ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಮ್ಮೆ ಮಹಿಳಾ ದರ್ಬಾರ್
ಈ ಹಿಂದೆ ರೋಹಿಣಿ ಸಿಂಧೂರಿ ಅವರು ಹಾಸನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಪೂರ್ಣಿಮಾ, ವೈಶಾಲಿ ಎಂಬುವರು ಅಪರ ಜಿಲ್ಲಾಧಿಕಾರಿ ಯಾಗಿದ್ದರು. ಅದಾದ ಬಳಿಕ ಈಗ ಮತ್ತೊಮ್ಮೆ ಡಿಸಿ-ಎಡಿಸಿ ಇಬ್ಬರೂ ಮಹಿಳೆಯರೇ ಆಗಿರುವುದು ವಿಶೇಷ. ಡಿಸಿಯಾಗಿ ಅರ್ಚನಾ ಅವರು ಅಧಿಕಾರ ವಹಿಸಿಕೊಂಡಿದ್ದರೆ, ಕವಿತಾ ರಾಜಾರಾಂ ಅವರು ಎಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಎಡಿಸಿ, ಡಿಸಿಯಾಗಿ ಕೆಲಸ ಮಾಡಿರುವ ಅನುಭವ ಇದೆ. ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲೆಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ. ಜಿಲ್ಲೆ ನನಗೆ ಅಷ್ಟಾಗಿ ಪರಿಚಯ ಇಲ್ಲ. ಕೆಲವು ದಿನ ಚಿಕ್ಕಮಗಳೂರು ಡಿಸಿಯಾಗಿದ್ದೆ. ರಾಜಕೀಯವಾಗಿ ಹಾಸನ ಪ್ರಾಬಲ್ಯ ಹೊಂದಿರುವ ಜಿಲ್ಲೆ. ಅನೇಕ ಜಿಲ್ಲೆಗಳಲ್ಲೂ ಇಂಥ ವ್ಯವಸ್ಥೆ ಇರುವುದರಿಂದ ಈ ಜಿಲ್ಲೆ ಪ್ರತ್ಯೇಕ ಎಂದು ನನಗೆ ಅನ್ನಿಸುತ್ತಿಲ್ಲ. ಉತ್ತಮ ಕೆಲಸ ಮಾಡಲು ಎಲ್ಲರ ಸಹಕಾರ ಕೋರುವೆ.
-ಎಂ.ಎಸ್.ಅರ್ಚನಾ, ನೂತನ ಡಿಸಿ
Tags
ಹಾಸನ