ಹಾಸನ:- ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಳೆಯಾಗುತ್ತಿದೆ. ಲೋಕೋಪಯೋಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೂ ರಾಜ್ಯ ಸರ್ಕಾರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ-ಕೊಡುಗು ಸೇರಿ 25 ಕೋಟಿ ಕೊಟ್ಟಿದ್ದಾರೆ. ಇದು ಯಾವುದಕ್ಕೆ ಸಾಲುತ್ತದೆ. ಉತ್ತರ ಕರ್ನಾಟಕಕ್ಕೆ 200 ಹಣ ಕೊಟ್ಟಿದ್ದಾರೆ. ಅಲ್ಲಿಗೆ ಕೊಡೋದಕ್ಕೆ ನನ್ನ ತಕರಾರು ಇಲ್ಲ. ಆದತರೆ ನಮ್ಮ ಜಿಲ್ಲೆಗೂ ಹೆಚ್ಚಿನ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಏನಾಗಿದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಅವರು ದಿನ ವಿಡಿಯೋ ಕಾನ್ಫರೆನ್ಸ್ ಮಾಡ್ತಾ ಇದ್ದಾರೆ ಅಷ್ಟೆ.ಆದರೆ ಯಾರಿಗಾದರೂ ಜವಾಬ್ದಾರಿ ಅನ್ನೋದು ಇದಿಯಾ, ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆ ಹಾನಿ ಪ್ರದೇಶಕ್ಕೆ ಸಚಿವರು, ಅಧಿಕಾರಿಗಳು ಹೋಗಿ ಪರಿಶೀಲನೆ ಮಾಡಿದ್ದಾರಾ ಎಂದು ಕೇಳಿದರು.
ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ನಾಟಿ ಮಾಡಿದ್ದ ಭತ್ತದ ಸಸಿ ಕೊಚ್ಚಿ ಹೋಗಿವೆ. ಆದರೂ ಯಾರೊಬ್ಬರೂ ಗಮನ ಹರಿಸಿಲ್ಲ ಎಂದು ದೂರಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನು ನಿಲ್ಸಿದ್ರು,
ಈಗ 140 ಸೀಟ್ ಗೆಲ್ತೀನಿ ಅಂಥ ಹೊರಟಿದ್ದಾರೆ, ಅದಕ್ಕಾದರೂ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ದಯಮಾಡಿ ರೈತರನ್ನು ಉಳಿಸಿಕೊಡಿ, ರೈತರು ವಿಷ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಸುಮ್ಮನೆ ವಿಡಿಯೋ ಕಾನ್ಫರೆನ್ಸ್ ಮಾಡೋದಲ್ಲ. ಬೆಳೆ ಹಾನಿ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿ ಎಂದು ಆಗ್ರಹಿಸಿದರು.
ಕೋಟಿ ಕೋಟಿ ಲೂಟಿ:
ಹುಡಾದಿಂದ ಸೈಟ್ ಕೊಡ್ತೀನಿ ಅಂಥ ನೂರು ಕೋಟಿ ಲೂಟಿ ಹೊಡೆದಿದ್ದಾರೆ. ಈ ತರದ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದು ಕಿಡಿ ಕಾರಿದ ಅವರು, ಜನರ ರಕ್ತ ಹೀರುವವರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನ ಕೊಟ್ಟಿದ್ದಾರೆ
ಇವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ ಎಂದು ಎಚ್ಚರಿಸಿದರು.
75 ವರ್ಷವಾದರೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ನಿಮ್ಮ ಕೈಯಲ್ಲಿ ಕೊಡಲಾಗದಿದ್ದರೆ ಮುಚ್ಚಿಬಿಡಿ ಎಂದರು.
ಈ ಹಿಂದೆ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದರು, ಈಗ ಕೆಲವೇ ಕೆಲ ವರ್ಗದವರು ಆಡಳಿತ ಮಾಡ್ತಿದ್ದಾರೆ. ಉಳ್ಳವರು ರಾಜ್ಯವನ್ನು ಆಳುತ್ತಿದ್ದಾರೆ ಎಂದು ನೊಂದು ನುಡಿದರು. ಇದೇ ರೀತಿ ಮುಂದುವರಿದರೆ ಯಡಿಯೂರಪ್ಪ ಮನೆ ಮನೆಗೆ ಹೋಗಿ ಗಂಟೆ ಹೊಡೆದರೂ ನಲವತ್ತು ಸೀಟಿಗೆ ಬರ್ತಾರೆ ಎಂದು ಭವಿಷ್ಯ ನುಡಿದರು.
ಶಕ್ತಿ ತೋರಿಸುತ್ತೇವೆ.
ಜೆಡಿಎಸ್ ಮುಗಿಸುತ್ತೇವೆ ಎಂದು ಎರಡೂ ಪಕ್ಷಗಳ ನಾಯಕರು ಅಂದು ಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಹೊಗೋ ರಸ್ತೆಯಲ್ಲಿ ಏನೂ ಉಳಿದಿಲ್ಲ.ಬರೀ ನನ್ನ ವಿಧಾನಸಭಾ ಕ್ಷೇತ್ರವಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಹೀಗೆ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿಲ್ಲ ಎಂದರು.
Tags
ಹಾಸನ