ಬೇಲೂರಿನಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ 'ಹೊಯ್ಸಳೋತ್ಸವ' ಆಚರಣೆ

ಹಾಸನ : ಬೇಲೂರಿನಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ 'ಹೊಯ್ಸಳೋತ್ಸವ' ಆಚರಣೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.

ಬೇಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ 'ಹೊಯ್ಸಳೋತ್ಸವ' ಆಚರಣೆ ಮಾಡಲಾಗುತ್ತದೆ, ಮುಂದಿನ ತಿಂಗಳೇ ಕಾರ್ಯಕ್ರಮ ನಡೆಯಲಿದೆ ಎಂದರು.

ಬೇಲೂರು ಮತ್ತು ಹಳೇಬೀಡು ಜಿಲ್ಲೆಯನ್ನು ವಿಶ್ವವಿಖ್ಯಾತವಾಗಿಸಿವೆ. ಹಾಸನವು ಹೊಯ್ಸಳರು ಆಡಳಿತ ಮಾಡಿರುವ ನಾಡು.ಹಾಗಾಗಿ ತಕ್ಷಣದ ಪ್ರವಾಸಿ ಸರ್ಕೀಟ್ನಲ್ಲಿ ಇವೆರಡನ್ನು ಸೇರಿಸಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಈ ತಾಣಗಳು ಯುನೆಸ್ಕೋ ಮಾನ್ಯತೆ ಹೊಂದಿದ ಜಗತ್ಪ್ರಸಿದ್ಧ ತಾಣ ಆಗಲಿದೆ ಎಂದರು.

ಸುಮಾರು ವರ್ಷಗಳಿಂದ ಇಲ್ಲಿ ಹೊಯ್ಸಳೋತ್ಸವ ಆಗಿಲ್ಲ. ಮುಂದಿನ ತಿಂಗಳು ವಿಜೃಂಭಣೆಯಿಂದ ಹೊಯ್ಸಳೋತ್ಸವ ಆಚರಣೆಯನ್ನು ಸರ್ಕಾರ ನಡೆಸಲಿದೆ ಎಂದು ಹೇಳಿದರು.

ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು, ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು ನೋಡಲು ಹೆಚ್ಚು ಹೆಚ್ಚು ಜನ ಬರುತ್ತಾರೆ. ಇಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ.

Post a Comment

Previous Post Next Post