ಕಾಡಾನೆ ದಾಳಿಯಿಂದ ಮನೆ ಜಖಂ: ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹಾನಿ

ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಸಮೀಪದ ಕ್ಯಾಮನಹಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಮನೆಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮೇಲ್ಚಾವಣಿ, ಕಿಟಕಿ, ಗೇಟ್‌ ಸೇರಿದಂತೆ ಸುಮಾರು ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹಾನಿ ಮಾಡಿದೆ.


ಗ್ರಾಮದ ಮುರುಳಿ ಎಂಬುವವರ ಮನೆಯ ಗೇಟ್‌ ಮುರಿದು ಒಳಗೆ ಬಂದಿರುವ ಒಂಟಿ ಸಲಗ, ಮನೆ ಮುಂಭಾಗದ ಮೇಲ್ಚಾವಣಿ ಜಖಂ ಮಾಡಿದೆ. ನೂರಾರು ಹೆಂಚುಗಳು ಹಾಗೂ ಮೇಲ್ಚಾವಣಿ ನಾಶವಾಗಿದೆ. ಭತ್ತವನ್ನು ದಾಸ್ತಾನು ಮಾಡಿದ್ದ ಕೊಠಡಿ ಹೊರಭಾಗದ ಕಿಟಕಿಯನ್ನು ಉರುಳಿಸಿದ್ದು, ಗೋಡೆ ಹಾಗೂ ಕಿಟಕಿ ಮನೆಯೊಳಗೆ ಉರುಳಿ ಬಿದ್ದಿವೆ. ಆನೆ ಮನೆಯ ಮೇಲೆ ದಾಳಿ ಮಾಡುವಾಗ ಮನೆಯೊಳಗೆ ಇದ್ದವರು ಜೀವ ಉಳಿದರೆ ಸಾಕು ಎಂದು ದೇವರನ್ನು ಪ್ರಾರ್ಥನೆ ಮಾಡಿ, ಉಸಿರು ಬಿಗಿ ಹಿಡಿದು ಅಡಗಿಕೊಂಡಿದ್ದಾಗಿ ಮನೆಯವರು ಹೇಳುತ್ತಾರೆ.

ಸ್ಥಳಕ್ಕೆ ಶಾಸಕ ಸಿಮೆಂಟ್‌ ಮಂಜು, ರಾಜ್ಯ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಬಿ. ರಾಜೀವ್‌, ವಲಯ ಅರಣ್ಯ ಅಧಿಕಾರಿ ಶಿಲ್ಪಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಸಕಲೇಶಪುರ ತಾಲ್ಲೂಕಿನ ಹಾನುಬಾಳು ಸಮೀಪದ ಕ್ಯಾಮನಹಳ್ಳಿ ಗ್ರಾಮದ ಮುರುಳಿ ಎಂಬುವವರ ಮನೆ ಮೇಲೆ ಮಂಗಳವಾರ ರಾತ್ರಿ ಕಾಡಾನೆ ದಾಳಿ ಮಾಡಿ ಕಿಟಕಿ ಜಖಂಗೊಳಿಸಿರುವುದು

ಪ್ರತಿಭಟನೆ ಎಚ್ಚರಿಕೆ: ಇದುವರೆಗೂ ಕಾಡಾನೆಗಳು ಬೆಳೆ ಹಾಗೂ ಜೀವ ಹಾನಿ ಮಾಡುತ್ತಿದ್ದವು. ಇದೀಗ ಮನೆಗಳ ಮೇಲೆ ದಾಳಿ ಮಾಡಿ, ಕಿಟಕಿ, ಮೇಲ್ಚಾವಣಿ, ಬಾಗಿಲು, ಕಾಂಪೌಂಡ್‌, ಗೇಟ್‌ ಎಲ್ಲವನ್ನೂ ನಾಶ ಮಾಡುತ್ತಿವೆ. ಪರಿಸ್ಥಿತಿ ಹೀಗಾದರೆ ಹೇಗೆ ಬದುಕಬೇಕು. ಯಾವುದೇ ಕಾರಣಕ್ಕೂ ಕಾಡಾನೆಗಳೊಂದಿಗೆ ಜೀವಭಯದಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ರಾಜ್ಯ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಬಿ. ರಾಜೀವ್‌ ಹೇಳಿದರು.

ಎಲ್ಲ ಕಾಡಾನೆಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ ಹಾಗೂ ಹೋಬಳಿ ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

Post a Comment

Previous Post Next Post