ಅನ್ಯಾಯ, ವಂಚನೆ, ಭ್ರಷ್ಠಾಚಾರ ಕಂಡುಬಂದ್ರೆ ಪ್ರತಿಭಟಿಸಿ: ಪತ್ರಕರ್ತ ಮಹಾಲಿಂಗಪ್ಪ ಯುವ ಪತ್ರಕರ್ತರಿಗೆ ಸಲಹೆ

ಹಾಸನ: ಸಮಾಜದಲ್ಲಿ ಅನ್ಯಾಯ, ವಂಚನೆ ಹಾಗೂ ಭ್ರಷ್ಠಾಚಾರ ಏನಾದರೂ ಕಂಡು ಬಂದರೇ ಪ್ರತಿಭಟನೆ ನಡೆಸಬೇಕೆಂದು ಹಿರಿಯ ಪತ್ರಕರ್ತರಾದ ಮಹಾಲಿಂಗಪ್ಪ ಅವರು ಸನ್ಮಾನ ಸ್ವೀಕರಿಸಿ ಯುವ ಪತ್ರಕರ್ತರಿಗೆ ಸಲಹೆ ನೀಡಿದರು.

      ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಿ ಮನದುಂಬಿ ಕಾರ್ಯಕ್ರಮದ ಅಂಗವಾಗಿ ಅವರ ನಿವಾಸದಲ್ಲಿ ಗುರುವಾರ ಸನ್ಮಾನ ಸ್ವೀಕರಿಸಿ ತಮ್ಮ ವೃತ್ತಿ ಅನುಭವ ಹಂಚಿಕೊಂಡರು. ರೈತ, ದಲಿತ ಸಂಘಟನೆಗಳ ಹೋರಾಟವೆಂದರೆ ಮೊದಲಿನಿಂದಲೂ ನನಗೆ ಕೆಚ್ಚು. ಅನ್ಯಾಯ ಕಂಡ ಕೂಡಲೇ ಪ್ರಶ್ನೆ ಮಾಡುವ ಮೂಲಕವೇ ಪತ್ರಿಕೋದ್ಯಮದಲ್ಲಿ ೩೫ ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದೇನೆ. ಪತ್ರಕರ್ತನಾದವನು ಅನ್ಯಾಯದ ವಿರುದ್ಧ ಧ್ವನಿ ಎತ್ತದ ಹೊರತು ಸಾಮಾಜಿಕ ಸುಧಾರೆಣೆ ಅಸಾಧ್ಯ ಎಂದರು. ಮಾಧ್ಯಮ ಕ್ಷೇತ್ರ ಈಗ ಉದ್ಯಮವಾಗಿ ಮಾರ್ಪಟ್ಟಿದೆ. ಪ್ರಸಕ್ತ ಕಾಲ ಘಟ್ಟಕ್ಕೆ ಅದು ಅನಿವಾರ್ಯವೇ ಆದರೂ ಪತ್ರಿಕೋದ್ಯಮದ ಬಗ್ಗೆ ಆಸಕ್ತಿಯೇ ಇಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿ ಕೇವಲ ಲಾಭದ ಉದ್ದೇಶದಿಂದ ಕೆಲಸ ಮಾಡುತ್ತಿರುವುದು ದುರಂತ. ವಾದಕ್ಕೆ ವಾದ ಎಂಬಂತೆ ಇಂದಿನ ಪೀಳಿಗೆಯ ಬಹುತೇಕರು ಜಾಳುಗಳಾಗುತ್ತಿದ್ದಾರೆ. ಇಂತಹ ಮನೋಭಾವ ಬಿಟ್ಟು ಸುದ್ದಿಯ ಆಳಕ್ಕಿಳಿದು ಕೆಲಸ ಮಾಡಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಯಾದ ಮಾತ್ರಕ್ಕೆ ಪತ್ರಕರ್ತನಾಗಲು ಸಾಧ್ಯವಿಲ್ಲ. ಸತ್ಯದ ಪರವಾಗಿ ನಿಸ್ಪಕ್ಷಪಾತ ವರದಿಗಾರಿಕೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.

      ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಆಡಂಬರವಿಲ್ಲದೇ ಅರ್ಥಪೂರ್ಣ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ರಾಜ್ಯ ಸಂಘದ ನಿರ್ದೇಶನದಂತೆ ಮನೆಯಂಗಳದಿ ಮನದುಂಬಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರ ಮನೆಗೆ ತೆರಳಿ ಕೆಲಹೊತ್ತು ಅವರೊಂದಿಗೆ ಮಾತುಕತೆ ನಡೆಸಿ ಅಭಿನಂದಿಸುವ ಆತ್ಮತೃಪ್ತಿ ಕಾರ್ಯಕ್ರಮ ಇದಾಗಿದೆ ಎಂದರು.

     ಇದೆ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ಪತ್ರಕರ್ತರಾದ ಹೆತ್ತೂರು ನಾಗರಾಜ್, ಎಚ್.ಡಿ. ಜೈಕುಮಾರ್ ಮಲ್ನಾಡ್, ತಿರುಮಲ ಇತರರು ಭಾಗವಹಿಸಿದ್ದರು

Post a Comment

Previous Post Next Post