( Mysore News) ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು, ಅಂದೇ ಕುಟುಂಬದ ಯಜಮಾನಿ ಖಾತೆಗೆ 2 ಸಾವಿರ ರೂ. ವರ್ಗಾವಣೆ ಆಗಲಿದೆ. ಬಟನ್ ಒತ್ತುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯೋಜನೆಗೆ (Gruha Lakshmi Scheme) ಚಾಲನೆ ನೀಡಲಿದ್ದು, 1,09,54,000 ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಅಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನಕ್ಕೆ ಭಾನುವಾರ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್ ಗೌಡ, ಡಿ.ರವಿಶಂಕರ್ ಭೇಟಿ ನೀಡಿ ವೇದಿಕೆ ನಿರ್ಮಾಣ ಕಾಮಗಾರಿ ಸೇರಿ ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಿ: ಲಕ್ಷ್ಮಿ ಹೆಬ್ಬಾಳಕರ್
ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸುತ್ತಿರುವ ಗೃಹ ಲಕ್ಷ್ಮಿ ಯೋಜನೆಯನ್ನು ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ಧೂರಿ ಸಮಾರಂಭದ ಮೂಲಕ ಉದ್ಘಾಟಿಸಲಾಗುತ್ತಿದೆ. ಈ ವೇಳೆ ಏಕಕಾಲದಲ್ಲಿ ಕೋಟ್ಯಂತರ ಮಹಿಳೆಯರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಭಾನುವಾರ ನಡೆದ ಯೋಜನೆಯ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಅಂದು ನಡೆಯಲಿರುವ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಂದ ಸುಮಾರು ಒಂದೂವರೆ ಲಕ್ಷ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಸ್ಥಳೀಯ ಶಾಸಕರು, ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪನವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳ ತವರೂರಿನಲ್ಲಿ ಸಮಾರಂಭದಲ್ಲಿ ನಡೆಯುತ್ತಿದ್ದು, ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವೆ ತಿಳಿಸಿದರು.
ಗೃಹಲಕ್ಷ್ಮಿ ಯಶಸ್ಸಿಗೆ ಪಣತೊಟ್ಟ ಸಚಿವೆ ಕಾರ್ಯವೈಖರಿಗೆ ಮೆಚ್ಚುಗೆ
ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಆಗಸ್ಟ್ 30 ರಂದು ಮೈಸೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಗೊಂಡ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೈಸೂರಿಗೆ ಧಾವಿಸಿ ಕಾರ್ಯಕ್ರಮದ ಸಂಪೂರ್ಣ ವಿವರ ಪಡೆದು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ ಹಾಗೂ ಅಗತ್ಯತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸಚಿವ ಮಹದೇವಪ್ಪ ಹಾಗೂ ಅಧಿಕಾರಿಗಳೊಂದಿಗೆ ಕಾರ್ಯಕ್ರಮದ ಸ್ಥಳ ವೀಕ್ಷಣೆ ಮಾಡಿದರು. ಹೀಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರ್ಯವೈಖರಿಗೆ ಪಕ್ಷದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.