ಆಲೂರುದಲ್ಲಿ ಬಡವರ ಮನೆ ಜೆಸಿಬಿ ಬಳಸಿ ಧ್ವಂಸ

ಆಲೂರು :-  ತಾಲೂಕಿನ ದಿಂಡಘಟ ಗ್ರಾಮದಲ್ಲಿ, ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಬಿಲ್ಲವ ಜನಾಂಗದ ಹಲವು ಮನೆಗಳನ್ನು ಜೆಸಿಬಿ ಯಂತ್ರದಿಂದ ಧ್ವಂಸ ಮಾಡಿದ ಘಟನೆ ನಡೆದಿದೆ. ಸುಮಾರು 25-30 ವರ್ಷಗಳಿಂದ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈ ಜನರು, ಸರ್ಕಾರಿ ಗೋಮಾಳ ಸರ್ವೇ ನಂಬರ್ ಒಂದರಲ್ಲಿ ತಮ್ಮ ಹಳೆಯ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಶಿಥಿಲಾವಸ್ಥೆಗೆ ತಲುಪಿದ್ದ ಈ ಮನೆಗಳನ್ನು ಪುನಃ ನಿರ್ಮಿಸಲು ಫೌಂಡೇಶನ್ ಹಾಕಿ ಚಾವಣಿ ಹಂತದಲ್ಲಿ ಬಿದ್ದಿದ್ದರು. ಆದ್ರೆ, ಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಭವ್ಯ ಪುರುಷೋತ್ತಮ್ ಬೆಂಬಲಿಗರು ಭಾನುವಾರ ಸಂಜೆ ಕೂಲಿ ಕೆಲಸಕ್ಕೆ ತೆರಳಿದ್ದಾಗ, ಕೆಲವು ಕಿಡಿಗೇಡಿಗಳು ಜೆಸಿಬಿ ಯಂತ್ರದ ಸಹಾಯದಿಂದ ಈ ಮನೆಗಳನ್ನು ಧ್ವಂಸ ಮಾಡಿದರು.


ನೊಂದ ಫಲಾನುಭವಿಗಳು, ತಾಲೂಕು ದಂಡಾಧಿಕಾರಿ, ಹಾಸನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರು, ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಅವುಗಳಿಗೆ ಸಂಬಂಧಿಸಿದ ನ್ಯಾಯವನ್ನು ಒದಗಿಸಲಿಲ್ಲ ಎಂದು ಕುಟುಂಬದ ಸದಸ್ಯರಾದ ರತ್ನಮ್ಮ, ರೂಪ, ಅರುಣ ಅವರು ಆರೋಪಿಸಿದ್ದಾರೆ. 


ಮಂಗಳವಾರ ಬೆಳಿಗ್ಗೆ, ವಿವಿಧ ಸಂಘಟನೆಗಳ ಮುಖಂಡರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ, ಅವರು ಎದುರಿಸುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಸುಮಾರು 30-40 ಲಕ್ಷ ರೂ. ಮೌಲ್ಯದ ನಷ್ಟವು ಈ ಮೂರು ಮನೆಗಳಿಂದ ಸಂಭವಿಸಿದೆ, ಮತ್ತು ಇದಕ್ಕಾಗಿ ಸರ್ಕಾರವೇ ಪರಿಹಾರ ಒದಗಿಸಬೇಕು. ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೆ ತರುವಂತೆ ಅವರು ಪ್ರತಿಭಟನೆ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದರು.


ರಾಧಮ್ಮ ಜನಸ್ಪಂದನ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್, ಸರ್ಕಾರಿ ಜಾಗದಲ್ಲಿ ವಾಸಿಸಲು ಮನೆಗಳನ್ನು ನಿರ್ಮಿಸಿರುವ ಬಡ ಜನರನ್ನು ಕಾನೂನು ಪ್ರಕಾರ ನೋಟಿಸ್ ನೀಡಿ, ಮನೆಗಳನ್ನು ತೆರವುಗೊಳಿಸಬೇಕೆಂದರು. ಅವರು ಈ ನಿಯಮವನ್ನು ಉಲ್ಲಂಘಿಸಿ, ಪ್ರಭಾವಿ ರಾಜಕಾರಣಿಗಳು ಬಡಜನರ ಮನೆಗಳನ್ನು ಧ್ವಂಸ ಮಾಡಿರುವುದನ್ನು ಖಂಡಿಸಿದರು. 


ಶಾಸಕ ಸಿಮೆಂಟ್ ಮಂಜು, ಸರ್ಕಾರಿ ಜಾಗದಲ್ಲಿ ಬಡವರು ಮನೆ ನಿರ್ಮಿಸಲು ಅವಕಾಶವಿದ್ದು, ಅದನ್ನು ಅಕ್ರಮ ಮತ್ತು ಸಕ್ರಮವಾಗಿ ಸರಿಪಡಿಸಬಹುದು ಎಂದು ಹೇಳಿದರು. ಈ ನಿಯಮವನ್ನು ಉಲ್ಲಂಘಿಸಿ ಬಡವರ ಮನೆಗಳನ್ನು ಧ್ವಂಸ ಮಾಡಿದವರು ತಪ್ಪಿತಸ್ಥರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಇನ್ನಿತರ ಸ್ಥಳೀಯರು ಸಹ ಭಾಗಿಯಾಗಿದ್ದರು.


ಸ್ಥಳಕ್ಕೆ ಭೇಟಿ ನೀಡಿದ  ಪೊಲೀಸ್ ಇನ್ಸ್ಪೆಕ್ಟರ್  ಗಂಗಾಧರ ಹಾಗೂ  ಪೊಲೀಸ್ ಮಂದಿ ಸ್ಥಳ ಪರಿಶೀಲನೆ ಮಾಡಿ  ಜನಗಳಿಂದ ವರದಿ ಪಡೆದಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ಪತ್ರಿಕೆಯೊಂದಿಗೆ ಮಾತನಾಡಿ  ಮನೆಗಳನ್ನು  ನೆಲ ಸಮ ಮಾಡಿರುವುದಕ್ಕೆ ನಮಗೆ ಯಾವುದೇ ಸಂಬಂಧ ಇಲ್ಲ. ಕೆಲವು ರಾಜಕೀಯ ಮುಖಂಡರು  ನಮ್ಮ ಮೇಲೆ ಇಲ್ಲಸಲ್ಲದ ಆರೋಪವನ್ನು ಎಸಗುತ್ತಿದ್ದಾರೆ. ಇವರೆಲ್ಲರೂ  ಚಿನ್ನಹಳ್ಳಿ ಗ್ರಾಮದಲ್ಲಿ ವಾಸವಿದ್ದು  ದಿಂಡಘಟ ಗ್ರಾಮದಲ್ಲಿ  ವತಿಗ್ರಾಮಣವಾಗಿ ಮನೆಗಳ ನಿರ್ಮಿಸಿದ್ದಾರೆ  ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ  ಬಿಜೆಪಿ ಮುಖಂಡರಾದ  ಅಜಿತ್ ಕಣಗಾಲ್, ಲೋಕೇಶ್ ದೊಡ್ಡ ಕಣಗಾಲು, ಹಬ್ಬನ ಕೃಷ್ಣಮೂರ್ತಿ, ಗಣೇಶ್, ಹನುಮಂತೇಗೌಡ, ಜೆಸಿಬಿ ರವಿ, ಕೇಶವಮೂರ್ತಿ, ಮಂಜುನಾಥ್ ಚಿಗಳೂರು ಮುಂತಾದವರು ಉಪಸ್ಥಿತರಿದ್ದರು.

Post a Comment

Previous Post Next Post