ಗೊರೂರು : ಸ್ಥಳೀಯ ಪದವಿಪೂರ್ವ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾಗಿರುವಂತಹ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪುಸ್ತಕಗಳನ್ನು "ಮಾಧವ ಕುಟುಂಬದ ಕುಟುಂಬಸ್ಥರು ಬೆಂಗಳೂರು"ಇವರು ಹಾಗೂ ಓರ್ವ ವಿದ್ಯಾರ್ಥಿಗೆ ತಲಾ 6 ಪುಸ್ತಕಗಳಂತೆ 600 ನೋಟ್ಸ್ ಪುಸ್ತಕಗಳ ವ್ಯವಸ್ಥೆಗಳನ್ನು ಕೆನರಾ ಬ್ಯಾಂಕ್ ಸಿಬಿಜೆಇಎಫ್ ತಂಡದ ವತಿಯಿಂದ ವಿತರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕೊಡುಗೆಯನ್ನು ಕೊಟ್ಟಿದ್ದಾರೆ, ಸಂಸ್ಥೆಗೆ ಆಗಮಿಸಿದ ಕೆನರಾ ಬ್ಯಾಂಕ್ ಗೊರೂರು ಶಾಖೆಯ ವ್ಯವಸ್ಥಾಪಕರಾದ ಅಕ್ಷಯ್ ಪಿ ರವರು ಮಾತನಾಡುತ್ತಾ ಕೆನರಾ ಬ್ಯಾಂಕ್ ಕೇವಲ ಆರ್ಥಿಕ ಭದ್ರತೆಗಳನ್ನು ಮಾತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕಗಳಂತಹ ವಿವಿಧ ಕ್ಷೇಮಾಭಿವೃದ್ಧಿ ಕಾರ್ಯಗಳತ್ತ ಬಹು ವಿಶೇಷವಾಗಿ ಸಹಕಾರವನ್ನು ನೀಡುತ್ತಾ ಬಂದಿರುತ್ತದೆ,ಭವ್ಯ ಭಾರತದ ಸದೃಢ ಸಮಾಜ ನಿರ್ಮಾಣ ಮಾಡಬಲ್ಲ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಯಾವುದೇ ರೀತಿಯ ತೊಡಕಾಗಬಾರದು ಆ ನಿಟ್ಟಿನಲ್ಲಿ ಗೊರೂರು ಶಾಖೆ ಸದಾ ಉತ್ಸುಕರಾಗಿದ್ದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಕರೆ ಕೊಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶೋಭಾರವರು ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಆರಂಭಗೊಂಡ ವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು ಸ್ಥಳೀಯ ಶಾಸಕರಾದಂತಹ ಸಿಮೆಂಟ್ ಮಂಜುರವರು ಉದ್ಘಾಟಿಸಿ ಕೊಡುವುದರೊಂದಿಗೆ,ಜಿಲ್ಲಾ ಉಪ ನಿರ್ದೇಶಕರು ವಿಜ್ಞಾನ ಪ್ರಯೋಗಾಲಯದ ನಿಯೋಜನೆಯನ್ನೂ, ಉಪನ್ಯಾಸಕರ ನಿಯೋಜನೆಗಳನ್ನು ಹಾಗೂ ವಿಭಾಗಕ್ಕೆ ಬೇಕಾದಂತ ಅಗತ್ಯ ಮೂಲಭೂತ ಸಲಕರಣೆಗಳನ್ನು ಒದಗಿಸಿಕೊಡುವುದರೊಂದಿಗೆ ಸಂಸ್ಥೆಗೆ ಸಹಕಾರವನ್ನಿತ್ತರೆ,ನಮ್ಮ ಗೊರೂರು ಕೆನರಾ ಬ್ಯಾಂಕ್ ಪ್ರತಿ ಬಾರಿಯೂ ಸಂಸ್ಥೆಗೆ ಬೇಕಾದಂಥ ಸಹಕಾರಗಳನ್ನು ನೀಡುತ್ತಲೇ ಬರುತ್ತಿದೆ,ಬ್ಯಾಂಕ್ ನ ಈ ಸಹಕಾರಗಳಿಗೆ ಕಾಲೇಜಿನ ಪ್ರತಿಯೊರ್ವರೂ ಆಭಾರಿಯಾಗಿದ್ದೇವೆ, ಹಾಗೂ ಸ್ಥಳೀಯರ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎನ್ನಲು ಹರ್ಷವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಿಬಿ ಜೆಇಎಫ್ ತಂಡದ ನಿವೃತ್ತ ವ್ಯವಸ್ಥಾಪಕರಾದ ಶ್ರೀನಾಥ್ ರವರು ಅಗಲಿರುವುದರಿಂದ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಹಾಜರಿದ್ದು, ಉಪನ್ಯಾಸಕರಾದಂತಹ ಜಗದೀಶ್ ರವರು ಸ್ವಾಗತಿಸಿ ನಿರೂಪಿಸಿದರು ಹಾಗೂ ಉಪನ್ಯಾಸಕರಾದ ಗೋವಿಂದರಾಜ್ ಅವರು ಸರ್ವರಿಗೂ ವಂದಿಸಿದರು.
