ಹಾಸನ:- ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿ ಸುಶಿಕ್ಷಿತರನ್ನಾಗಿ ಮಾಡುವುದರ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ತಿಳಿಸಿದ್ದಾರೆ.
ಗಾಂಧಿ ಭವನ ಹಾಸನ, ರೆಡ್ ಕ್ರಾಸ್ ಸಂಸ್ಥೆ, ಪ್ರೇರಣಾ ವಿಕಾಸ ವೇದಿಕೆ, ಹಸಿರು ಭೂಮಿ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನ.೧೬ ಮತ್ತು ೧೭ ರಂದು ಆಯೋಜಿಸಿರುವ ಚರಕ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಪ್ರಾಮಾಣಿಕವಾಗಿ ನಡೆದುಕೊಳ್ಳುವಂತೆ ತಿದ್ದಿ ತಿಳುವಳಿಕೆ ಹೇಳಬೇಕು ಎಂದರು.
ಜ್ಞಾನಕ್ಕಾಗಿ ವಿದ್ಯೆಬೇಕು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಉದ್ಯೋಗಕ್ಕಾಗಿ ಅಲೆಯುವ ಬದಲು ತಮ್ಮಲ್ಲಿರುವ ಕೌಶಲ್ಯತೆಯನ್ನು ಬಳಸಿಕೊಂಡು ಸೃಜನಾತ್ಮಕವಾಗಿ ಕೆಲಸ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡಲು ಒಂದು ಸಣ್ಣ ಪ್ರಯತ್ನವಾಗಿ ಪ್ರಾರಂಭಿಸಲಾಗಿದೆ. ಈ ಶಿಬಿರ ಫಲಕಾರಿಯಾಗಲಿ ಎಂದು ಶುಭ ಹಾರೈಸಿದರಲ್ಲದೆ, ಎಲ್ಲಾ ಶಾಲಾ ಮಕ್ಕಳು ಈ ಶಿಬಿರದ ಲಾಭ ಪಡೆಯುವಂತಾಗಲಿ ಎಂದು ತಿಳಿಸಿದರು.
ನಾವು ಧರಿಸುವ ಬಟ್ಟೆಯ ಹಿಂದೆ ಎಷ್ಟು ಜನರ ಪರಿಶ್ರಮ ಅಡಗಿದೆ ಎಂಬುದನ್ನು ಮಕ್ಕಳಿಗೆ ಗೊತ್ತುಪಡಿಸಬೇಕು ಎಂದರಲ್ಲದೆ, ಸಣ್ಣ ಮಕ್ಕಳಲ್ಲಿಯೇ ಸ್ವಾವಲಂಬಿ ಬದುಕಿನ ಚಿಂತನೆ ಬಿತ್ತಬೇಕು ಎಂದು ತಿಳಿಸಿದರು.
ಗಾಂಧಿ ಭವನವನ್ನು ಅಚ್ಚುಕಟ್ಟಾಗಿ ಇರಿಸುವುದರ ಜೊತೆಗೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ಸವಾಲು ಈ ನಿಟ್ಟಿನಲ್ಲಿ ಗಾಂಧಿ ಭವನ ನಿರ್ವಹಣೆಗೆ ಒಂದು ಸಮಿತಿ ರಚನೆ ಮಾಡಿದ್ದು, ಗಾಂಧಿ ತತ್ವಗಳಿಗೆ ಅನುಗುಣವಾಗಿ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಬಳಕೆ ಮಾಡಿಕೊಳ್ಳಲು ಈಗಾಗಲೇ ದರ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.
ಕೈ ಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರಾದ ಕೆ ಜ್ಯೋತಿ ಅವರು ಮಾತನಾಡಿ ನಾವು ಮಾತನಾಡುವ ಬದಲಾಗಿ ನಾವೆಲ್ಲರೂ ಒಂದು ಕಡೆ ಸೇರಿ ಹೆಚ್ಚು ಕಾರ್ಯ ಮಾಡುವ ಮೂಲಕ ಅದು ಮಾತನಾಡುವಂತೆ ಆಗಬೇಕು ಎಂದು ತಿಳಿಸಿದರು.
ಭೂಮಿ, ನೀರು, ವಾಯು ಎಲ್ಲವೂ ಕಲುಷಿತವಾಗಿವೆ ಮುಂದಿನ ಪೀಳಿಗೆಗೆ ಉತ್ತಮವಾದ ವಾತಾವರಣ ಉಳಿಸಲು ಎಲ್ಲರ ಜವಾಬ್ಬಾರಿ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡಲು ಪ್ರಾರಂಭಿಸಿರುವುದು ಒಂದು ಉತ್ತಮ ಬೆಳವಣಿಗೆ ಪ್ರತಿ ಮನೆಗೊಂದು ಚರಕ ಬಳಕೆಗೆ ಬಂದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮೈಸೂರಿನ ಸಚ್ಚಿನಾಂದ ಕೆ.ಜೆ ಅವರು ಮಾತನಾಡಿ ಗಾಂಧಿಯನ್ನು ಸ್ಮರಿಸಿ ಮಾತನಾಡುವ ಬದಲಾಗಿ ಅವರು ಮಾಡಿರುವಂತಹ ಕೆಲಸಗಳನ್ನು ಅನುಸರಿಸಿ ಕಾರ್ಯಗತಗೊಳ್ಳಿಸುವ ನಿಟ್ಟಿನಲ್ಲಿ ಸಾಗಿದರೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿದರು.
ಕೆಲವು ಉತ್ಪನ್ನಗಳನ್ನು ಫವರ್‌ಲೂಮ್ ಮಾಡುವಂತಿಲ್ಲ ಆದರೂ ಸಹ ಹಾಗೆಯೇ ಮುಂದುವರೆಯುತ್ತಿದೆ ಎಂದ ಅವರು ಖಾದಿಗೂ - ಹ್ಯಾಂಡ್‌ಲೂಮ್‌ಗೂ ವ್ಯತ್ಯಾಸವಿದೆ ಎಂದರು. ಶಾಲೆಯಲ್ಲಿ ಮಕ್ಕಳು ವಾರಕ್ಕೊಮ್ಮೆ ನೂಲು ತೆಗೆದರೆ ವರ್ಷಕ್ಕೆ ಆಗುವ ಸಮವಸ್ತç ತಯಾರಿಸಬಹುದು ಎಂದು ತಿಳಿಸಿದರು.
ಆರ್.ಪಿ ವೆಂಕಟೇಶಮೂರ್ತಿ ಅವರು ಮಾತನಾಡಿ ಗಾಂಧಿಭವನದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಬೇಕು ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಚರಕ ತರಬೇತಿ ನೀಡುವ ಮೂಲಕ ಇದೊಂದು ಆಂದೋಲನವಾಗಬೇಕು ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಪಿ ಮೋಹನ್, ಪ್ರೇರಣಾ ವಿಕಾಸ ವೇದಿಕೆಯ ಅಧ್ಯಕ್ಷರಾದ ರೂಪ ಹಾಸನ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಸಿ.ಬಿ ವೆಂಕಟೇಗೌಡ ಮತ್ತಿತರರು ಹಾಜರಿದ್ದರು.