ಹಾಸನ: ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಹೊಳೆನರಸೀಪುರ ತಾಲೂಕಿನ ವಳಂಬಿಗೆ ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು.
ಈ ವೇಳೆ ಗ್ರಾಮದ ಮಂಜುಳಾ, ಲಕ್ಷ್ಮಿ ಹಾಗೂ ರುಕ್ಮಿಣಿ ಮಾತನಾಡಿ, ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು ಸುಮಾರು 12 ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ಕುಡಿತಕ್ಕೆ ದಾಸರಾಗಿದ್ದಾರೆ ಎಂದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಚಿಕ್ಕ ಚಿಕ್ಕ ವಯಸ್ಸಿಗೆ ಮಕ್ಕಳೂ ಕುಡಿತಕ್ಕೆ ದಾಸರಾಗಿ ಶಾಲೆ ತೊರೆದು ಕುಳಿತಿದ್ದಾರೆ ಅಲ್ಲದೆ ಕುಡಿದು ಬಂದ ಗಂಡಸರು ಮಹಿಳೆಯರು ಹಾಗೂ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಮಾಡುವ ಪ್ರಕರಣಗಳು ಹೆಚ್ಚಾಗಿವೆ ಆದುದರಿಂದ ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು ಎಂದರು.
ಈ ಬಗ್ಗೆ ತಾಲೂಕು ಮಟ್ಟದ ಸಭಂದಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಪೋಲಿಸರು ಒಮ್ಮೊಮ್ಮೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ಆದರೆ ಅವರ ಜೊತೆಗೇ ಶಾಮೀಲಾಗಿ ಪ್ರಕರಣವನ್ನು ಅಲ್ಲಿಗೆ ಕೈ ಬಿಟ್ಟಿದ್ದಾರೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಇನ್ನು ಮದ್ಯ ಮಾರಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಗ್ರಾಮದ ನೇತ್ರ, ಮಂಜುಳಾ, ಮಹಾಲಕ್ಷ್ಮಿ, ರಾಣಿ, ರೇಣುಕಾ, ಕಾಳಮ್ಮ, ರತ್ನಮ್ಮ, ಲಕ್ಷ್ಮಮ್ಮ, ಮಾದೇವಿ, ರುಕ್ಮಿಣಿ, ಪಾರ್ವತಿ, ಮಣಿ, ಇಂದ್ರಮ್ಮ, ರಾಣಿ ಇತರರು ಇದ್ದರು.