ಹಾಸನ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಚುನಾವಣೆ ಪ್ರಣಾಳಿಕೆಯ ಭರವಸೆ ಮೊತ್ತ ಒಟ್ಟುಗೂಡಿಸಿ ೧೫,೦೦೦ ಮಾಸಿಕ ಗೌರವಧನ ನೀಡಬೇಕು. ಬಹುದಿನಗಳ ಈ ಬೇಡಿಕೆಯೂ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಕೆ ಸಂಬಂಧ ಹಾಲಿ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಹೊರಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ಆಶಾ ಗಳನ್ನಾಗಿ ನೇಮಕ ಮಾಡಿಕೊಂಡು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎನ್ನುವ ಸರ್ಕಾರ, ಹಲವು ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಸಲು ಮೀನಾಮೇಷ ಎಣಿಸುತ್ತಿದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ದೂರಿದರು.
ವಷಗಳಿಂದ ಮಾಡಿದ ಕೆಲಸಕ್ಕೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಇದರಿಂದ ನಮಗೆ ಅನ್ಯಾಯ ಆಗುತ್ತಿದೆ. ಈ ಸಂಬಂಧ ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರೂ, ಯಾರಿಂದಲೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ಈಗಲಾದರೂ ರಾಜ್ಯ ಸರ್ಕಾರ ಹಾಲಿ ೫೦೦೦ ಸಾವಿರ ಮಾಸಿಕ ನಿಶ್ಚಿತ ಗೌರವಧನ ನೀಡುತ್ತಿದೆ. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ೭೦೦೦, ಆನ್‌ಲೈನ್ ಸಮಸ್ಯೆಯಿಂದ ಸಂಪೂರ್ಣ ಬರುತ್ತಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಜೊತೆ, ಆಶಾ ಕಾರ್ಯಕರ್ತೆಯರಿಗೆ ೩ ಸಾವಿರ ಗೌರವಧನ ಹೆಚ್ಚಿಸುವ ಕುರಿತು ಣಾಳಿಕೆಯಲ್ಲಿ ನೀಡಿರುವ ಹಣ ಒಟ್ಟು ಗೂಡಿಸಿ ೧೫,೦೦೦ ಗೌರವಧನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ೪ ಪ್ರಮುಖ ಬೇಡಿಕೆ ಈಡೇರಿಸಬೇಕೆಂದು ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅನಿರ್ದಿಷ್ಟ ಹೋರಾಟ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಆಗ ಕೆಲವೇ ದಿನಗಳಲ್ಲಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಡಿಸಿಎಂ ಅವರು ಭರವಸೆ ನೀಡಿದ್ದರು. ಯಾವುದೇ ಈಡೇರಿಲ್ಲ ಎಂದು ಅಳಲು ತೋಡಿಕೊಂಡರು.
ಕಳೆದ ೯ ತಿಂಗಳಿಂದ ಸರ್ಕಾರ ಮತ್ತು ಇಲಾಖೆ ಜೊತೆಯಲ್ಲಿ ಒಟ್ಟು ೧೫ ರಾಜ್ಯ ಮಟ್ಟದ ಸಭೆ ನಡೆದರೂ, ನಮ್ಮ ಪ್ರಮುಖ ಬೇಡಿಕೆ ಈಡೇರಿಲ್ಲ. ಇದೇ ಕಾರಣಕ್ಕೆ ಮತ್ತೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಒಟ್ಟಾರೆ ೧೫ ಸಾವಿರ ಮಾಸಿಕ ಗೌರವಧನ, ನಗರ ಮಟ್ಟದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ೨ ಸಾವಿರ ಹೆಚ್ಚಿಸಬೇಕು, ಮೊಬೈಲ್ ಕೆಲಸ ಒತ್ತಾಯಪೂರ್ವಕವಾಗಿ ಮಾಡಿಸುವುದನ್ನು ನಿಲ್ಲಿಸಿ, ಪರ‍್ಯಾಯ ವ್ಯವಸ್ಥೆ ಮಾಡಿ. ೬೦ ವಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದಂತೆ ೩ ಲಕ್ಷ ಪಿಂಚಿನಿ ಕೊಡಬೇಕು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೂ, ಪ್ರೋತ್ಸಾಹಧನ ಕೊಡಬೇಕು, ಪ್ರತಿ ವರ್ಷ ಆರೋಗ್ಯ ತಪಾಸಣೆ, ಉಚಿತ ಚಿಕಿತ್ಸೆ ನೀಡಬೇಕು. ಗ್ರಾಚ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿ. ಹನುಮೇಶ್, ಮಮತಾ, ಪುಷ್ಪಲತಾ, ಮೇಘನಾ ಮೊದಲಾದವರಿದ್ದರು.