ಹಾಸನ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರತಿಕೃತಿಯ ಶವಯಾತ್ರೆ ನಡೆಸುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಶಾ.. ಪ್ರತಿಕೃತಿ ದಹಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ಕಿಡಿ ಕಾರಿದರು.
ಈ ವೇಳೆ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಸೋಮಶೇಖರ್ ಮಾತನಾಡಿ, ಅಧಿವೇಶನದಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ವ್ಯಂಗ್ಯ ಹಾಗೂ ಅವಹೇಳನಕಾರಿ ಮಾತುಗಳನ್ನ ಆಡಿರುವುದು ಖಂಡನೀಯ ಎಂದರು.
ಸಂವಿಧಾನದ ಅಡಿಯಲ್ಲಿ ಚುನಾವಣೆಯಲ್ಲಿ ಗೆದ್ದು ಸಚಿವನಾಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಂಬೇಡ್ಕರ್ ಅವರ ಬಗ್ಗೆ ಇರುವ ಗೌರವ ಅಧಿವೇಶನದಲ್ಲಿ ಬಹಿರಂಗವಾಗಿದೆ. ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಇದ್ದರೆ ಅಮಿತ್ ಶಾ ಹೇಗೆ ಕೇಂದ್ರ ಸಚಿವರಾಗುತ್ತಿದ್ದರು ಎಂದು ಪ್ರಶ್ನಿಸಿದ ಅವರು ಸಂವಿಧಾನದ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಮಿತ್ ಶಾ ಅವರವೇ ಬಗ್ಗೆ ವ್ಯಂಗ್ಯ ಭರಿತ ಮಾತನಾಡಿರುವುದನ್ನು ಪ್ರಗತಿಪರ ಸಂಘಟನೆಗಳು ಸಹಿಸುವುದಿಲ್ಲ ಎಂದರು.
ಎಚ್.ಕೆ ಸಂದೇಶ್ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ವಿವಾದಗಳಾದಾಗ ಸಂವಿಧಾನದ ಅಡಿಯಲ್ಲಿ ತೀರ್ಮಾನ ಹಾಗೂ ಬಗೆಹರಿಸಲು, ಕ್ರಮ ಕೈಗೊಳ್ಳಲು ನಿಯಮಗಳಿವೆ. ಅದರ ಬಗ್ಗೆ ಕನಿಷ್ಠ ಪ್ರಜ್ಞೆಯು ಇಲ್ಲದೆ ಇರುವ ಗ್ರಹ ಸಚಿವ ಅಮಿತ್ ಶಾ ಸಂವಿಧಾನ ಬರೆದ ಅಂಬೇಡ್ಕರ್ ಅವರ ಬಗ್ಗೆಯೇ ಅವಹೇಳನಕಾರಿ ಮಾತುಗಳನ್ನಾಡಿರುವುದು ಶಾ ಅವರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಮೊದಲಿನಿಂದಲೂ ದಲಿತರ, ಬಡವರ, ಕೂಲಿ ಕಾರ್ಮಿಕರ ವಿರುದ್ಧವಾಗಿ ಆಡಳಿತ ಮಾಡಿಕೊಂಡು ಬಂದಿದೆ. ಈ ಹಿಂದೆಯಿಂದಲೂ ಸಂವಿಧಾನ ಬದಲಾಯಿಸಲು ತಂತ್ರಗಾರಿಕೆ ಮಾಡುತ್ತಿರುವ ಬಿಜೆಪಿ ತನ್ನ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ, ಅಮಿತ್ ಶಾ ಹೇಳಿಕೆ ಸಂವಿಧಾನ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಹೊಂದಿರುವ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಈ ರೀತಿಯ ಹೇಳಿಕೆಗಳನ್ನು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜನರ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತುವ ಬದಲು ಮೌಡ್ಯ ಭಾವನೆ ಬಿತ್ತಲು ಮುಂದಾಗಿರುವ ಬಿಜೆಪಿ ಜನರ ಮನಸ್ಸಿನಲ್ಲಿ ಕೋಮು ಭಾವನೆ ಸೃಷ್ಟಿಸಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ ಕೂಡಲೇ ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು ಇಲ್ಲವಾದರೆ ಈಗಾಗಲೇ ಹಂತ ಹಂತವಾಗಿ ನಶಿಸಿ ಹೋಗುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಸಂಪೂರ್ಣ ರಾಷ್ಟ್ರ ಮಟ್ಟದಲ್ಲಿಯೂ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ, ಈರೆಶ್ ಈರೇಹಳ್ಳಿ, ಕೃಷ್ಣಾದಾಸ್, ಧರ್ಮೇಶ್, ಪೃಥ್ವಿ, ರಾಜು, ಹರೀಶ್, ವಿಜಿಕುಮಾರ್, ಜಗದೀಶ್, ರಾಜಕೇಖರ್, ತೋಟೆಶ್, ಇತರರು ಇದ್ದರು