ಹಾಸನ,ಮೇ.28:- ಹೊರರಾಜ್ಯಗಳಿಂದ ಬಂದು ಕೋವಿಡ್-19 ಪಾಸಿಟೀವ್ ಆಗಿದ್ದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತರಲ್ಲಿ ಇಂದು 29 ಜನ ಬಿಡುಗಡೆಯಾಗುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಸಂತೋಷದ ಸುದ್ದಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ನಗರದ ಕೋವಿಡ್ ಆಸ್ಪತ್ರೆಯಲ್ಲಿಂದು ಗುಣಮುಖರಾದವರನ್ನು ಮನೆಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಪಾಸಿಟೀವ್ ಬಂದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿರುವ ಕಾರಣ 7 ದಿನಗಳ ನಂತರ ಪರೀಕ್ಷೆಗೆ ಒಳಪಡಿಸಿ ನೆಗೆಟೀವ್ ವರದಿ ಬಂದರೆ, ಅಂತಹವರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರದ ನಿರ್ದೇಶನ ಬಂದಿದೆ. ಈ ಕಾರಣ ಇಂದು ನೆಗೆಟಿವ್ ಬಂದಂತಹವರನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲಾ ಹಾಗೂ ರಾಜ್ಯಮಟ್ಟದ ತಜ್ಞರ ಸಮಿತಿ ಮಾಹಿತಿಯಂತೆ ಜಿಲ್ಲೆಯಲ್ಲಿರುವ ಸೋಂಕಿತರೆಲ್ಲರೂ ಆರೋಗ್ಯವಂತರಾಗಿದ್ದು, ಯಾವುದೇ ರೀತಿಯ ರೋಗಲಕ್ಷಣಗಳು ಅವರಲ್ಲಿ ಕಂಡು ಬಂದಿಲ್ಲ, ಕಳೆದ ಮೂರು ದಿನಗಳಿಂದ ಯಾವುದೇ ರೋಗಲಕ್ಷಣಗಳಿಲ್ಲದೆ, ಪರೀಕ್ಷೆಯಲ್ಲಿ ಕೋವಿಡ್ ನಗೆಟೀವ್ ಬಂದವರನ್ನೂ ಸಹ ಬಿಡುಗಡೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಇಂದು ಬಿಡುಗಡೆಯಾದವರಲ್ಲಿ 6 ಜನ ಹೊಳೆನರಸೀಪುರಕ್ಕೆ ಸೇರಿದವರಾಗಿದ್ದು, ಉಳಿದ 26 ಜನ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿದ್ದಾರೆ. ಬಿಡುಗಡೆಯಾದವರು ಕಡ್ಡಾಯವಾಗಿ 14 ದಿನಗಳವರೆಗೆ ಹೋಂ ಕ್ವಾರಂಟೈನ್‍ನಲ್ಲಿರಬೇಕು, ಈ ನಿಟ್ಟಿನಲ್ಲಿ ಅವರಿಗೆ ಕ್ವಾರಂಟೈನ್ ಮುದ್ರೆ ಹಾಕಿ ಅವರ ಮನಗಳಿಗೆ ಕ್ವಾರಂಟೈನ್ ಸ್ಟಿಕ್ಕರ್‍ಗಳನ್ನು ಅಂಟಿಸಲಾಗುವುದು. ಅಲ್ಲದೇ ಕ್ವಾರಂಟೈನ್ ಆ್ಯಪ್ ಮೂಲಕ ಅವರ ಮೇಲೆ ಪ್ರತಿನಿತ್ಯ ನಿಗಾ ಇಡುವುದರ ಜೊತೆಗೆ ಆರೋಗ್ಯ ಸಿಬ್ಬಂದಿಗಳು ಅವರ ಮನೆಗೆ ಪ್ರತಿದಿನ ಬೇಟಿ ನೀಡುವರು ಎಂದರು.
ಜಿಲ್ಲೆಯಲ್ಲಿ ಪುನಃ 3 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಮುಂಚಿತವಾಗಿಯೇ ಕ್ವಾರಂಟೈನ್ ಮಾಡಲಾಗಿತ್ತು. ಮೂವರಲ್ಲಿ ಇಬ್ಬರು ಮುಂಬಯಿ ಹಾಗೂ ಒಬ್ಬರು ತಮಿಳುನಾಡಿನಿಂದ ಬಂದಿದ್ದರು ಎಂದು ಆರ್. ಗಿರೀಶ್ ಹೇಳಿದರು.
ನಂತರ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಮಾತನಾಡಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ. ದಾಖಲಾಗಿರುವ ಸೋಂಕಿತರೆಲ್ಲರೂ ಆರೋಗ್ಯವಂತರಾಗಿದ್ದು, ಸಧ್ಯಕ್ಕೆ ಇದುವರೆಗೂ ಯಾವ ಸೋಂಕಿತರೂ ಸಹ ವೆಂಟಿಲೇಟರ್‍ಗೆ ಹೋಗುವ ಪರಿಸ್ಥಿತಿ ಬಂದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಮಹರಾಷ್ಟ್ರ ಹಾಗೂ ತಮಿಳುನಾಡಿನಿಂದ ಬಂದವರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಆದ್ದರಿಂದ ಹೊರರಾಜ್ಯಗಳಿಂದ ಬರುವವರೆಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
Tags
ಹಾಸನ