ನಗರದ ವಿವಿಧ ಸ್ಥಳಗಳಲ್ಲಿಂದು ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮುಖ್ಯಮಂತ್ರಿಯವರು ಹಾಸನ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ ವರಗೆ ಅನುದಾನ ನೀಡಿದ್ದು, ಪ್ರತಿ ಗ್ರಾಮಕ್ಕೆ 50 ಲಕ್ಷ ರೂ. ನಿಂದ ಒಂದು ಕೋಟಿ ರೂ. ವರೆಗಿನ ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದರು.
ಕಾವೇರಿ ನಿಗಮದ ವತಿಯಿಂದ 144 ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಒಂದೆರಡು ತಿಂಗಳಲ್ಲಿ ವಿವಿಧ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳು ಪ್ರಾರಂಭವಾಗುತ್ತವೆ ಎಂದು ಅವರು ತಿಳಿಸಿದರು.
ಬೂವನಹಳ್ಳಿ ಗ್ರಾಮದ ವಿವಿಧ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗೆ 2ಕೋಟಿ 30 ಲಕ್ಷ ರೂ. ಅನುದಾನ ನೀಡಿದ್ದು, ರಸ್ತೆ ಅಭಿವೃದ್ಧಿಗೆ ಇರುವ ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.
ನಗರದ ಸಾಲಗಾಮೆ ಭಾಗದ ಕಡದರ ಹಳ್ಳಿಯಿಂದ ಕಸಬದ ನಿಡೂಣಿ ವರೆಗೆ ಒಟ್ಟು 12 ಗ್ರಾಮಗಳಲ್ಲಿಂದು ವಿವಿಧ ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಅವರು ಹೇಳಿದರು.
ಹಾಸನ ಕ್ಷೇತ್ರದ ವಿವಿಧ ಗ್ರಾಮಗಳ ಕಾಮಗಾರಿಗಳು ಡಿಸೆಂಬರ್ ಮಾಹೆಯೊಳಗೆ ಪ್ರಾರಂಭವಾಗುತ್ತದೆ ಎಂದರಲ್ಲದೆ, ನಗರದ ಹುಣಸಿನ ಕೆರೆ, ಸತ್ಯಮಂಗಲ ಕೆರೆ, ತೇಜೂರು ಕೆರೆ ಹಾಗೂ ಇನ್ನಿತರ 7 ಕೆರೆ ಮತ್ತು ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮಾಸ್ಕ್ ಧರಿಸುವುದರ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ತಡೆಗಟ್ಟುವಲ್ಲಿ ಮುಂದಾಗಬೇಕು ಎಂದು ಪ್ರೀತಂ ಜೆ. ಗೌಡ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.
Tags
ಹಾಸನ