ಶಾಸಕರಿಂದ ಕಾಮಗಾರಿ ಪರಿಶೀಲನೆ ಮತ್ತು ಸಭೆ

ಕೊಣನೂರು: ಸಮೀಪದ ಅರಸೀಕಟ್ಟೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಡೆಯುತ್ತಿರುವ ಅತಿಥಿಗೃಹ, ಶೌಚಾಲಯ, ರಸ್ತೆನಿರ್ಮಾಣ, ಗಿಡನೆಡಬೇಕಾದ ಸ್ಥಳಗಳಿಗೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಮೀಪದ ಅರಸೀಕಟ್ಟೆಯಮ್ಮ ದೇವಾಲಯದ ಬಳಿ 8 ಕೋಟಿ ರೂ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ನಡೆಸಿದ ಸಭೆಯಲ್ಲಿ ಮಾತನಾಡಿದ ಶಾಸಕರು ಅರಸೀಕಟ್ಟೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ನೀರು, ವಿದ್ಯುತ್ ಮುಂತಾದ ಅಗತ್ಯ ಸೇವೆಗಳು ದೊರಕುವಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
 ಪ್ರತಿನಿತ್ಯ ಸಾವಿರಾರು ಜನರು ಬರುವ ಕ್ಷೇತ್ರದಲ್ಲಿನ ಅಂದ ಹೆಚ್ಚಿಸುವಂತೆ ರಸ್ತೆಗಳ ಬದಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. 
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಿರ್ಮಿಸಬೇಕಿರುವ ಕಾಟೇಜ್‍ಗಳು, ಹೈಟೆಕ್ ಶೌಚಾಲಯಗಳು ಮತ್ತು 20 ಲಕ್ಷ ವೆಚ್ಚದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಪ್ರಾರಂಭಿಸಲು ಮತ್ತು ಸ್ವಚ್ಚತೆ , ಕಚೇರಿಯ ನಿರ್ವಹಣೆಗೆ ಅವಶ್ಯಕ ಸಿಬ್ಬಂದಿಯ ನೇಮಕ ಕುರಿತಂತೆ  ಹಾಗೂ ದೇವಾಲಯದ ಬಳಿ ಸುಂಕವಸೂಲಿ ಹರಾಜಿಗೆ ವ್ಯವಸ್ಥೆಮಾಡಿಕೊಳ್ಳುವಂತೆ ತಹಶೀಲ್ದಾರರಿಗೆ ತಿಳಿಸಿದರು. 
ಲಕ್ಕನಹಳ್ಳಿಯಿಂದ ಅರಸೀಕಟ್ಟೆ ಸಂಪರ್ಕಿಸುವ 55 ಲಕ್ಷ  1.6 ಕಿಮೀ ರಸ್ತೆ ಮತ್ತು ಬಿದರೂರಿನಿಂದ ಅರಸೀಕಟ್ಟೆ ಸಂಪರ್ಕಕ್ಕೆ 40 ಲಕ್ಷ ವೆಚ್ಚದ ಕಾಮಗಾರಿ ಪ್ರಾರಂಭಿಸುವಂತೆ ಹೆಚ್.ಆರ್ ಪಿ ಇಲಾಖೆಯ ಅಧಿಕಾರಿಗಳಿಗೆ, ನೂತನ ಬಲಿಪೀಠ ಮತ್ತು ಎಡೆಪೀಠ ಸ್ಥಾಪಿಸಿದ್ದು, ದೇವಾಲಯದ ಕಟ್ಟಡವನ್ನು ಶಿಥಿಲಗೊಳಿಸುತ್ತಿರುವ ಅರಳಿಮರವನ್ನು ತೆರವುಗೊಳಿಸುವಂತೆ ಸೂಚಿಸಿದರು.
ಅವರು ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಉಳಿದಿರುವ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಗುಣಮಟ್ಟದಲ್ಲಿ ಕೈಗೊಳ್ಳಿ ಎಂದರು. ಮತ್ತು ಅಗತ್ಯವಿರುವೆಡೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಅಗತ್ಯವಿರುವಲ್ಲಿ ಹೈಮಾಸ್ಟ್ ಲೈಟ್ ಗಳನ್ನು ಅಳವಡಿಸುವಂತೆ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾ.ಪಂ ಇ ಓ ರವಿಕುಮಾರ್, ನೀರಾವರಿ ಇಲಾಖೆಯ ಇ ಇ ರಾಜೇಗೌಡ,  ಎಇಇ ಜಯರಾಮ್, ತಿಮ್ಮಪ್ಪ, ಹೇಮಾವತಿ ಪುನರ್ವಸತಿ ಉಪವಿಭಾಗ ಎ ಇ ಇ ಪುನೀತ್, ಜಿ.ಪಂ ಎ ಇ ಇ ದಿನೇಶ್, ವಲಯ ಅರಣ್ಯಾಧಿಕಾರಿ ಅರುಣ್, ಅರಣ್ಯ ಸೆಸ್ಕಾಂನ ಎಇಇ ಚಿನ್ನಸ್ವಾಮಿ, ಅಸಿಸ್ಟೆಂಟ್ ಇಂಜಿನಿಯರ್ ನವೀನ್, ರಾಜೇಂದ್ರ, ಲೋಕೇಶ್, ರಾಜಸ್ವ ನಿರೀಕ್ಷಿಕ ಕಿರಣ್, ಪಿಡಿಓ ಶಿವಪ್ಪ, ಗ್ರಾಮಲೆಕ್ಕಿಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.

Post a Comment

Previous Post Next Post