ಹಾಸನ: ಜೂನ್ 21ರ ಭಾನುವಾರ ಘಟಿಸಲಿರುವ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧಕ ಕೇಂದ್ರ ಮತ್ತು ಭಾರತ ಜ್ಞಾನವಿಜ್ಞಾನ ಸಮಿತಿ ಸಹಯೋಗದಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿ ಗ್ರಹಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧಕ ಕೇಂದ್ರ ಟ್ರಸ್ಟ್‍ನ ಕಾರ್ಯದರ್ಶಿ ಎಚ್.ಆರ್.ನವೀನ್‍ಕುಮಾರ್ ತಿಳಿಸಿದ್ದಾರೆ.
ಗ್ರಹಣೋತ್ಸವ ಕಾರ್ಯಕ್ರಮ ಹೇಮಾವತಿ ಪ್ರತಿಮೆ ಬಳಿ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಗ್ರಹಣ ವೀಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಗ್ರಹಣ ಸಂದರ್ಭದಲ್ಲಿ ಏನನ್ನೂ ಸೇವಿಸಬಾರದು ಎಂಬ ಮೂಢನಂಬಿಕೆ ಮುರಿಯುವ ಉದ್ದೇಶದಿಂದ ಸಾರ್ವಜನಿಕವಾಗಿ ಉಪಾಹಾರ ಸೇವನೆ ಮಾಡಲಾಗುವುದು. ಗ್ರಹಣ ವಿದ್ಯಮಾನವು ಸೂರ್ಯ-ಭೂಮಿ-ಚಂದ್ರರ ನಡುವಿನ ಖಗೋಳ ಕೌತುಕವಾಗಿದ್ದು, ಎಲ್ಲರೂ ಭಾನುವಾರ ಹೇಮಾವತಿ ಬಳಿ ಆಯೋಜಿಸುವ ಗ್ರಹಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಗ್ರಹಣ ವೀಕ್ಷಿಸಬೇಕು. ಈ ವೇಳೆಗ್ರಹಣ ವೀಕ್ಷಿಸಲು ತಮ್ಮಲ್ಲಿರುವ ಸೋಲಾರ್ ಫಿಲ್ಟರ್ ಅನ್ನು ತರಬೇಕು. ಸೋಲಾರ್ ಫಿಲ್ಟರ್ ಇಲ್ಲದಿದ್ದರೆ ಸ್ಥಳದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಕೋವಿಡ್ ಸಂಬಂಧ ಸೂಚನೆಗಳನ್ನು ಪಾಲಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಲೇಬೇಕು ಮತ್ತು ದೈಹಿಕ ಅಂತರವನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಂಕಣ ಸೂರ್ಯಗ್ರಹಣವು ಹಾಸನದಲ್ಲಿ ಬೆಳಗ್ಗೆ 10.13 ರಿಂದ ಮಧ್ಯಾಹ್ನ 1.31 ರವರೆಗೆ ಗೋಚರಿಸಲಿದೆ.
Tags
ಹಾಸನ