ಹಾಸನ.ಜೂ.20:- ಜಿಲ್ಲೆಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬಂದಿರುವ ತೊಗರಿಬೇಳೆ ಗುಣಮಟ್ಟ ಕಳಪೆ ಇದ್ದು, ಅದನ್ನು ಯಾವುದೇ ಕಾರಣಕ್ಕು ಸ್ವೀಕರಿಸಿ ಮಕ್ಕಳಿಗೆ ವಿತರಿಸದಂತೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ತೀರ್ಮಾನಿಸಿದೆ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಹೆಚ್.ಡಿ ರೇವಣ್ಣ, ಸಿ.ಎನ್ ಬಾಲಕೃಷ್ಣ, ವಿಧಾನ ಪರಿಷತ್ ಸಂಸದರಾದ ಎಂ.ಎ ಗೋಪಾಲಸ್ವಾಮಿ ಮತ್ತಿತರರು ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣ ಅವರು ಈಗಾಗಲೇ ಈ ತೊಗರೆಬೇಳೆಯ ಗುಣಮಟ್ಟ ಪರೀಕ್ಷಿಸಿ ಕಳಪೆ ಇರುವ ಕಾರಣ ತಿರಸ್ಕರಿಸಲಾಗಿದೆ ಎಂದರು.
ಸಭೆಗೆ ಆಗಮಿಸಿದ್ದ ಎಸ್.ಐ.ಆರ್.ಡಿ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಪ್ರಸಾದ್ ಅವರು 15 ನೇ ಹಣಕಾಸು ಆಯೋಗದ ಮಾರ್ಗಸೂಚಿಗಳ ಬಗ್ಗೆ ವಿವರಣೆ ನೀಡಿ, ಆಯೋಗದಿಂದ ಬಿಡುಗಡೆಯಾಗುವ ಹಣವನ್ನು ಜಿಲ್ಲಾ ಪಂಚಾಯ್ತಿಗೆ ಶೇ. 5% ರಷ್ಟು, ತಾಲ್ಲೂಕು ಪಂಚಾಯ್ತಿಗೆ ಶೇ.10% ರಷ್ಟು ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಶೇ. 80% ರಷ್ಟು ವಿಭಜನೆ ಮಾಡಬೇಕಿದೆ, ಕಾಮಗಾರಿಗಳ ಯೋಜನಾ ಚಟುವಟಿಕೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ನಿದಿಪಡಿಸಿದ ದಿನಾಂಕದೊಳಗೆ ಸಲ್ಲಿಸಬೇಕು ಹಾಗೂ ಒಂದು ಬಾರಿ ಸಲ್ಲಿಸಿದ ಯೋಜನಾ ಪಟ್ಟಿಯನ್ನು ಪುನಃ ಪರಿವರ್ತಿಸಲಾಗುವುದಿಲ್ಲ ಎಂದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರವೇ ಹಣವನ್ನು ಬಳಸಬೇಕಾಗಿದ್ದು, ಆದಷ್ಟು ದೊಡ್ಡಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು, ಅಂದರೆ ಒಂದು ಕಾಮಗಾರಿ ಕನಿಷ್ಠ ನಾಲ್ಕು ಗ್ರಾಮ ಪಂಚಾಯ್ತಿಗಳಿಗೆ ಅನುಕೂಲವಾಗುವಂತಿರಬೇಕು ಎಂದು ಹಣಕಾಸು ಆಯೋಗದ ಅಧಿಕಾರಿ ತಿಳಿಸಿದರು.
ಶಾಸಕರಾದ ಹೆಚ್.ಡಿ ರೇವಣ್ಣ, ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ ಹಾಗೂ ಲಿಂಗೇಶ್ ಅವರು ಮಾತನಾಡಿ ಯೋಜನಾ ವೆಚ್ಚದ ನಿರ್ವಹಣೆಗೆ ಗ್ರಾಮ ಪಂಚಾಯ್ತಿಗಳಿಗೆ ಇರುವ ನಿಯಮಾವಳಿಗಳನ್ನೇ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳಿಗೂ ಮಾಡಬೇಕು. ಈ ರೀತಿ ಮಾಡುವುದರಿಂದ ಅನುದಾನದ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಹಿಂದಿನ ಸಭೆ ಹಾಗೂ ವಿವಿಧ ಸ್ಥಾಯಿ ಸಮಿತಿ ಸಭೆಗಳ ನಡಾವಳಿಗಳನ್ನು ಅನುಮೋದಿಸಲಾಯಿತು.
ಈಗಾಗಲೇ ಜಿಲ್ಲಾ ಪಂಚಾಯ್ತಿ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿ ಶ್ರಮಿಸಬೇಕು, ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಮನ್ವಯತೆಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವಲ್ಲಿ ಕೈಜೋಡಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಶಾಸಕರುಗಳಾದ ಹೆಚ್.ಡಿ ರೇವಣ್ಣ, ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ, ಲಿಂಗೇಶ್, ಹೆಚ್. ಕೆ ಕುಮಾರಸ್ವಾಮಿ, ಹಾಗೂ ಪ್ರೀತಂ ಜೆ ಗೌಡ ತಿಳಿಸಿದರು.
Tags
ಹಾಸನ