ಹಾಸನ.ಜೂ.16:- ಮಹಾಭಾರತದಲ್ಲಿ ಕರ್ಣ ಶ್ರೇಷ್ಠವಾದ ದಾನಿಯಾದರೆ ಪ್ರಸ್ತುತ ಜೀವನಿಧಿಯಾದ ರಕ್ತವನ್ನು ದಾನ ಮಾಡುವವರೇ ಶ್ರೇಷ್ಠವಾದ ದಾನಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಶ್ರೀನಿವಾಸ್ ಗೌಡ ಅವರು ತಿಳಿಸಿದ್ದಾರೆ.
ನಗರದ ರೆಡ್‍ಕ್ರಾಸ್ ಭವನದಲ್ಲಿ ಇಂದು ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವನ್ನು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನ ಮಾಡುವುದು ಶ್ರೇಷ್ಠವಾದ ಕಾರ್ಯ. ಈ ನಿಟ್ಟಿನಲ್ಲಿ ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅಂತೆಯೇ ಈಗಿನ ಯುವ ಪೀಳಿಗೆ ಸ್ವಯಂ ಪ್ರೇರಿತರಾಗಿ ಹೆಚ್ಚು ಹೆಚ್ಚು ರಕ್ತದಾನ ಮಾಡಬೇಕು ಎಂದರು.
ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ನಾಗೇಶ್ ಆರಾಧ್ಯ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿಯೂ ಸಹ ಅನೇಕ ಜನರಿಗೆ ರಕ್ತದಾನದ ಬಗ್ಗೆ ತಪ್ಪು ತಿಳುವಳಿಕೆ ಇದೆ. ಆದ್ದರಿಂದ ಯುವ ಪೀಳಿಗೆ ರಕ್ತದಾನ ಮಾಡುವ ಮೂಲಕ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮುಂದೆ ಬರಬೇಕು ಎಂದರು.
ರಕ್ತಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ರಕ್ತ ಶೇಖರಣೆಯಾಗಿರುವುದು ಸಂತೋಷದ ವಿಷಯ. ಕೆಲವರಿಗೆ ನಾವು ಉಚಿತವಾಗಿ ರಕ್ತದಾನಮಾಡಿದರೂ ಸಹ ನಮಗೆ ರಕ್ತದ ಅಗತ್ಯತೆ ಇದ್ದಾಗ ನಿರ್ದಿಷ್ಟ ಹಣ ಪಡೆದು ನೀಡಲಾಗುತ್ತದೆ ಎಂಬ ಸಂದೇಹವಿರುತ್ತದೆ. ಇದಕ್ಕೆ ಕಾರಣ ದಾನಿಗಳಿಂದ ಪಡೆದ ರಕ್ತವನ್ನು ನೇರವಾಗಿ ರೋಗಿಗಳಿಗೆ ನೀಡಲಾಗುವುದಿಲ್ಲ. ಅನೇಕ ರೀತಿಯ ಪರೀಕ್ಷೆಗೆ ಒಳಪಡಿಸಿದ ನಂತರವೇ ನೀಡಬೇಕು. ಹಾಗಾಗಿ ಆ ಪರೀಕ್ಷೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯಲಾಗುವುದು ಎಂದರು.
ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಜಯಂತ್ ಅವರು ಮಾತನಾಡಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠವಾದ ಕಾರ್ಯ. ಹಾಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಆದ ಹೆಚ್.ಪಿ. ಮೋಹನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆಯಿತ್ತು. ಈ ನಿಟ್ಟನಲ್ಲಿ ವಿವಿಧ ಸಂಘಟನೆಗಳ ನೆರವಿನಿಂದ ಹಲವಾರು ಶಿಬಿರಗಳನ್ನು ಮಾಡಿ ಸುಮಾರು 500 ಯೂನಿಟ್ ಗಳಷ್ಟು ರಕ್ತವನ್ನು ಶೇಖರಿಸಿ ರಕ್ತನಿಧಿಗಳಿಗೆ ಪೂರೈಕೆ ಮಾಡಲಾಯಿತು. ಹಾಗಾಗಿ ಸಮಾಜಕ್ಕೆ ರಕ್ತದಾನಿಗಳ ಕೊಡುಗೆ ಅಪಾರವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಹೆಚ್ಚುಬಾರಿ ರಕ್ತದಾನ ಮಾಡಿರುವ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ರಾಜ್ಯ ಮಜ್ದೂರ್ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ದಿಲೀಪ್, ಸವಿತಾ ಸಮಾಜದ ಅಧ್ಯಕ್ಷರಾದ ರವಿಕುಮಾರ್ ಹಾಗೂ ಮತ್ತಿತರರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
Tags
ಹಾಸನ