ಮಲೇರಿಯಾ ತಡೆಗಟ್ಟಲು ಮುಂದಾಗುವಂತೆ ಕರೆ: ನಿಂಗೇಗೌಡ


ಹಾಸನ.ಜೂ.16:- ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾದಂತೆ ಕಾಯಿಲೆಗಳು ಹೆಚ್ಚಾಗುತ್ತವೆ ಹಾಗಾಗಿ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟು ಮಲೇರಿಯಾ ತಡೆಗಟ್ಟಲು ಎಲ್ಲರೂ ಮುಂದಾಗುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ನಿಂಗೇಗೌಡ ಅವರು ತಿಳಿಸಿದ್ದಾರೆ.
 ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಮಲೇರಿಯಾ ವಿರೋಧ ಮಾಸಾಚರಣೆ ಕಾರ್ಯಮಕದಲ್ಲಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಆಹಾರ ಸೇವನೆಯಿಂದ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಮಲೇರಿಯಾದಂತಹ ರೋಗಗಳನ್ನು ಹೋಗಲಾಡಿಸಬಹುದು ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತ್ ಅವರು ಮಾತನಾಡಿ ಇತ್ತೀಚೆಗೆ ಹಲವಾರು ಹೊಸಕಾಯಿಲೆಗಳು ಉತ್ಪತ್ತಿಯಾಗುತ್ತಿದ್ದು, ಪೂರಕವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಯಾವುದೇ ರೋಗಗಳು ಬರದಂತೆ ತಡೆಯಬಹುದು ಎಂದರು.
 ತಹಶೀಲ್ದಾರ್ ಶಿವಶಂಕರಪ್ಪ ಅವರು ಮಾತನಾಡಿ ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಜನರಲ್ಲಿ ವಿವಿಧ ರೋಗಗಳು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು ಎಂದರು.
 ತಾಲ್ಲೂಕು ವೈದ್ಯಾಧಿಕಾರಿ ಡಾ|| ಬಿ.ಎಂ. ವಿಜಯ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ಶೂನ್ಯಕ್ಕೆ ತರುವ ಮೂಲಕ ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸುವುದು ಈ ಕಾರ್ಯಕ್ರಮದ ಮುಖ್ಯ ದ್ಯೇಯವಾಗಿದೆ ಎಂದರು.
 ಕಲ್ಲು ಕ್ವಾರಿಗಳು, ದೊಡ್ಡ ದೊಡ್ಡ ಹೊಂಡಗಳು ಹಾಗೂ ಮತ್ತಿತರ ಸ್ಥಳಗಳಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಅನಾಫಿಲಿಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಸೊಳ್ಳೆಗಳ ಮೊಟ್ಟಗಳನ್ನು ತಿನ್ನಲು ಗಪ್ಪಿ ಮತ್ತು ಗ್ಯಾಂಬೋಸಿಯಾ ಲಾರ್ವಹಾರಿ ಮೀನುಗಳನ್ನು ಬಿಡುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
 ತಾಲ್ಲೂಕು ಪಂಚಾಯ್ತಿ ಉಪಾದ್ಯಕ್ಷರಾದ ಬೇಬಿ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮು ಹಾಗೂ ತಾಲ್ಲೂಕು ಪಂಚಾಯ್ತಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Post a Comment

Previous Post Next Post