ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸೂಕ್ತ ವಾತಾವರಣ ಸೃಷ್ಠಿಸಿ: ಸಚಿವ ಎಸ್. ಸುರೇಶ್

ಹಾಸನ.ಜೂ.22:- ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳು ಭಯಬೀತರಾಗದೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೂರಕ ವಾತಾವರಣ ಸೃಷ್ಠಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವರಾದ ಎಸ್. ಸುರೇಶ್ ಅವರು ಸೂಚಿಸಿದ್ದಾರೆ.

 ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವ ಸಿದ್ದತೆ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಜೂ. 25 ರಿಂದ ಜುಲೈ.4 ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಹಾಗೂ ಪರೀಕ್ಷೆಗೆ ಮುನ್ನ ಮತ್ತು ನಂತರ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವಂತೆ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಿ ಎಂದರು.

 ಜೂ.24 ರಂದು ಪರೀಕ್ಷಾ ಕೇಂದ್ರಗಳಲ್ಲಿ ಕೂರುವ ಕೊಠಡಿ ಹಾಗೂ ಸ್ಥಳಗಳನ್ನು ವೀಕ್ಷಿಸಲು  ವಿದ್ಯಾರ್ಥಿಗಳು ಬರುತ್ತಾರೆ ಹಾಗಾಗಿ ಅಂದು ಹಾಗೂ ಉಳಿದೆಲ್ಲಾ ದಿನದಂದು ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಶೇಷನ್ ಮಾಡುವಂತೆ ಸೂಚನೆ ನೀಡಿ ಎಂದು ಎಲ್ಲಾ ಜಿಲ್ಲಧಿಕಾರಿಗಳಿಗೆ ಅವರು ತಿಳಿಸಿದರು.

 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯು ವಿದ್ಯಾರ್ಥಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿದ್ದರೆ ಅಥವಾ ಸೋಂಕಿತರಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ದಿನದಂದು ಬರೆಸಿ ಪ್ರಥಮ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಎಂದು ಸಚಿವರಾದ ಎಸ್. ಸುರೇಶ್ ಅವರು ನಿರ್ದೇಶಿಸಿದರು.

 ಪರೀಕ್ಷಾ ಕೇಂದ್ರಗಳ ಗೇಟ್ ಹತ್ತಿರ ಮತ್ತು ಬ್ಯಾರಿಕೇಡ್ ಹತ್ತಿರ ವಿದ್ಯಾರ್ಥಿಗಳು ಗುಂಪುಗಟ್ಟಲು ಅವಕಾಶ ನೀಡುವಂತಿಲ್ಲ, ಪೋಷಕರು ಕೇಂದ್ರದೊಳಗೆ ಹೋಗದಂತೆ ಎಚ್ಚರವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಸಚಿವರು ಸೂಚಿಸಿದರು.

 ಪರೀಕ್ಷೆ ದಿನದಂದು ವಿದ್ಯಾರ್ಥಿಗಳನ್ನು ತಪಾಸಣೆ ಮಾಡುವುದರಿಂದ ಬೆಳಗ್ಗೆ ವಿದ್ಯಾರ್ಥಿಗಳು 7.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಲಿದ್ದು, ಪರೀಕ್ಷಾ ಕೇಂದ್ರದ ಸಿಬ್ಬಂಧಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಅದಕ್ಕೆ ಮುನ್ನವೇ ಹಾಜರಿರುವಂತೆ ಸೂಚನೆ ನೀಡಿ ಎಂದು ಸುರೇಶ್ ಕುಮಾರ್ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದರು.

 ಆರೊಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒಂದುಗೂಡಿ ಕಂಟೋನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಬರೆಯುವವರು ಎಷ್ಟು ಮಕ್ಕಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದರಲ್ಲದೆ, ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ನಡೆಸಿ ಮತ್ತು ಎಲ್ಲರಿಗೂ ಎನ್-95 ಮಾಸ್ಕ್ ಕಡ್ಡಾಯವಾಗಿ ನೀಡಬೇಕು ಎಂದು ಸಚಿವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು. 

 ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಿರುವ ಮಾಸ್ಕ್‍ಗಳನ್ನು ಹೊರತುಪಡಿಸಿ ಯಾರಾದರು ದಾನಿಗಳು, ಸಂಘ ಸಂಸ್ಥೆಗಳು ಮಾಸ್ಕ್ ನೀಡಲು ಬಂದರೆ ಅಂತಹವರನ್ನು ಪರೀಕ್ಷಾ ಕೇಂದ್ರದ ಬಳಿ ಸೇರಿಸದಂತೆ ಪೊಲೀಸ್ ಸಿಬ್ಬಂಧಿಗಳು ಎಚ್ಚರವಹಿಸಬೇಕು ಅದಲ್ಲದೇ, ಯಾವುದಾದರು ವಿದ್ಯಾರ್ಥಿ ಮಾಸ್ಕ್ ಮರೆತು ಬಂದರೆ ಅಂತವರಿಗೆ ಮತ್ತೊಂದು ಮಾಸ್ಕ್ ನೀಡುವಂತೆ ಅವರು ಸೂಚಿಸಿದರು.

 ಪ್ರತಿ ವಿದ್ಯಾರ್ಥಿಗಳು ಮನೆಯಿಂದಲೇ ನೀರನ್ನು ತರಲು ಸೂಚಿಸಿದ್ದು, ಯಾವುದಾದರು ವದ್ಯಾರ್ಥಿ ಮರೆತು ಬಂದರೆ ಅಂತಹವರಿಗೆ ಶುದ್ಧ ನೀರು ಒದಗಿಸುವ ವ್ಯವಸ್ಥೆ ಕಲ್ಪಿಸಿ ಎಂದರಲ್ಲದೆ, ಪರೀಕ್ಷಾ ಕೇಂದ್ರಗಳ ಶೌಚಾಲಯಗಳನ್ನು ಪ್ರತಿದಿನ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿ ಎಂದು ಸಚಿವರಾದ ಸುರೇಶ್ ಕುಮಾರ್ ಎಲ್ಲಾ ಅಧಿಕಾರಿಗಳಿಗೆ ಹೇಳಿದರು.

 ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಜಗದೀಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಧರಿಸವ ಮಾಸ್ಕ್‍ಗಳು ಅವರಿಗೆ ಆರಾಮದಾಯಕವಾಗಿವೆ ಎಂಬುದನ್ನು ಪರಿಶೀಲಿಸಲು ಸೂಚನೆ ನೀಡಿ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಧ್ವನಿ ವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ಮತ್ತು ಪರೀಕ್ಷೆ ಕುರಿತು ಇರುವ ಭಯವನ್ನು ಹೋಗಲಾಡಿಸುವ ಕಾರ್ಯ ಮಾಡಿ ಎಂದರು. 

 ಪ್ರತಿದಿನ ಪರೀಕ್ಷೆ ನಡೆದ ನಂತರ ಯಾವ ರೀತಿ ಪರೀಕ್ಷೆ ನಡೆಸಲಾಯಿತು ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಕುರಿತು ಮೀಡಿಯಾದಲ್ಲಿ ಸಂಪೂರ್ಣ ಮಾಹಿತಿ ನೀಡಿ ಪೋಷಕರಿಗೆ ತಿಳಿಯುವಂತೆ ಮಾಡಿ ಎಂದು ಅವರು ತಿಳಿಸಿದರು.

 ಪ್ರತಿ ವಿದ್ಯಾರ್ಥಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಿ ಹಾಗೂ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ವಿಶೇಷ ಗಮನಹರಿಸಿ ಮಕ್ಕಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ವ್ಯವಸ್ಥೆ ಮಾಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದರು.

 ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಈಗಾಗಲೇ ಹಾಕಿಕೊಂಡಿರುವ ಪೂರ್ವ ಸಿದ್ಧತೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

 ಇದೇ ವೇಳೆ ಕಂಟೋನ್ಮೆಂಟ್ ವಲಯಗಳಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರಿ ವಾಹನದ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರದೊಯ್ಯುವ ವ್ಯವಸ್ಥೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿಯವರು ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾ ಗೌಡ, ಜಿಲ್ಲಾ ಪಂಚಾಯತ್ ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪ್ರಕಾಶ್ ಹಾಗೂ ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

Post a Comment

Previous Post Next Post