ಪೋಷಕರು ಮತ್ತು ಮಕ್ಕಳು ಭಯಪಡುವಂತಿಲ್ಲ: ಕೆ. ಗೋಪಾಲಯ್ಯ

ಹಾಸನ.ಜೂ.17:- ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡುವ ಅಗತ್ಯವಿಲ್ಲ  ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಹೇಳಿದ್ದಾರೆ.
ನಗರದ ಸಂತ ಜೋಸೆಫ್ ಶಾಲೆಯ ಸಭಾಂಗಣದಲ್ಲಿಂದು ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರೀಕ್ಷೆಗೂ ಮುನ್ನ ಎಲ್ಲಾ ಶಾಲೆಗಳನ್ನು ಸ್ಯಾನಿಟೈಸ್ ಮಾಡಿ, ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ ಆರೋಗ್ಯ ತಪಾಸಣೆ ಮಾಡಿ ಪರೀಕ್ಷೆ ನಡೆಸಲಾಗುವುದು. ಜಿಲ್ಲಾಡಳಿತ ಇದಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ನಡೆಸಿದೆ ಎಂದರು.

ಕಳೆದ ಬಾರಿ ಜಿಲ್ಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದು, ಈ ಬಾರಿಯೂ ಅದೇ ರೀತಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಜಿಲ್ಲೆಯನ್ನು ಪುನಃ ಪ್ರಥಮ ಸ್ಥಾನದಲ್ಲೇ ಉಳಿಯುವಂತೆ ಮಾಡಲು ಶಿಕ್ಷಕರು ತಮ್ಮ ಸಂಪೂರ್ಣ ಶ್ರಮ ಹಾಕಬೇಕು ಎಂದು ಸಚಿವರು ಹೇಳಿದರು. 

ಉತ್ತಮವಾಗಿ ಪಲಿತಾಂಶ ತರಲು ಶ್ರಮವಹಿಸುವ ಶಿಕ್ಷಕರಿಗೆ ಹಾಗೂ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ತಾವು ಪ್ರೋತ್ಸಾಹವಾಗಿ 1 ಲಕ್ಷ ರೂಗಳ ಬಹುಮಾನ ನೀಡುವುದಾಗಿ ಸಚಿವರು ಘೋಷಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ತಮ್ಮ ಎಲ್ಲ ವಿದ್ಯಾರ್ಥಿಗಳ ಕ್ಷಮತೆ ಶಿಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ಪರೀಕ್ಷೆಗೆ ಕೇವಲ ಕೆಲವು ದಿನಗಳು ಮಾತ್ರ ಬಾಕಿ ಇವೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಡನೆ ನಿರಂತರ ಸಂಪರ್ಕದಲ್ಲಿದ್ದು ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಆತ್ಮಸ್ಥೈರ್ಯ ತುಂಬಬೇಕುಎಂದು ಕೆ. ಗೊಪಾಲಯ್ಯ ಅವರು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂದ್ಯಾ ಅವರು ಮಾತನಾಡಿ ರಾಜ್ಯ ಸರ್ಕಾರದ ಕೋವಿಡ್ ನಿಯಂತ್ರಣಾ ಕ್ರಮಗಳಂತೆ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ವಹಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪ್ರಶಂಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ 1 ಕೋಟಿ ಮಾಸ್ಕ್‍ಗಳನ್ನು ತಯಾರಿಸಿ ಶಾಲೆಗಳಿಗೆ ವಿತರಿಸಲಾಗಿದೆ ಎಂದರಲ್ಲದೆ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ತಮ್ಮ ಸೇವೆಯನ್ನು ಒದಗಿಸಲಿದ್ದಾರೆ. ಈ ಕಾರ್ಯದಲ್ಲಿ ಎಲ್ಲರ ಸಹಕಾರ ಅತ್ಯವಶ್ಯಕ ಎಂದರಲ್ಲದೆ ಅತ್ಯಂತ ಜಾಗರೂಕತೆಯಿಂದ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸುತ್ತಿರುವ ಸರ್ಕಾರ ಹಾಗೂ ಎಲ್ಲ ಅಧಿಕಾರಿಗಳ ಪರಿಶ್ರಮ ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಅಂಗವಾಗಿ ತೆಗೆದುಕೊಳ್ಳಲಾಗಿರುವ ಎಲ್ಲಾ ಅಗತ್ಯ ಕ್ರಮಗಳ ಬಗ್ಗೆ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪರೀಕ್ಷಾ ದಿನಗಳಲ್ಲಿ ಅಗತ್ಯ ಪ್ರಮಾಣದ ಹೆಚ್ಚುವರಿ ಬಸ್‍ಗಳು ಸಂಚರಿಸುವಂತೆ  ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಂತರ ಸಭೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕೊಡುಗೆ ನೀಡಲಾದ ಮಾಸ್ಕ್‍ಗಳನ್ನು ಸಚಿವರು ತಾಲ್ಲೂಕುವಾರು ವಿತರಣೆ ಮಾಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಉಪವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್, ಗಿರೀಶ್ ನಂದನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪ್ರಕಾಶ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ವೀರಭದ್ರಪ್ಪ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

Previous Post Next Post