ಕಲಾಪದಿಂದ ಹೊರಗುಳಿಯೋ ಎಚ್ಚರಿಕೆ ಕೋರ್ಟ್ : ಸ್ಯಾನಿಟೈಸ್ ಮಾಡಲು ವಕೀಲ ಸಂಘ ಆಗ್ರಹ

ಹಾಸನ: ಕೋರ್ಟ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮತ್ತವರ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲಾ ಕೋರ್ಟ್ ಆವರಣವನ್ನು ಸ್ಯಾನಿಟೈಸ್ ಮಾಡದೇ ಇದ್ದರೆ ಸೋಮವಾರಿಂದ ಕಲಾಪದಿಂದ ಹೊರಗುಳಿಯುವ ನಿರ್ಧಾರ ಮಾಡಬೇಕಾಗುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇದೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ 6ನೇ ಜೆಎಂಎಫ್‍ಸಿ ನ್ಯಾಯಾಧೀಶರು ಸ್ವಯಂ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಬೆಳವಣಿಗೆ ಸಹಜವಾಗಿಯೇ ವಕೀಲ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಇಡೀ ಕೋರ್ಟ್ ಆವರಣವನ್ನು ಸ್ಯಾನಿಟೈಸ್ ಮಾಡುವಂತೆ ಕೆಲ ದಿನಗಳಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ನ್ಯಾಯಾಲಯಕ್ಕೆ ನಿತ್ಯವೂ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಸೇರಿದಂತೆ ಹಲವು ಮಂದಿ ಬಂದು ಹೋಗುತ್ತಾರೆ.
ನಮ್ಮ ಮನವಿ ನಂತರ ಕೇವಲ ಒಂದು ಪ್ರದೇಶಕ್ಕೆ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಪರಿಸ್ಥಿತಿ ಕೈ ಮೀರಿ ಹೋದಾಗ ಲಕ್ಷ ಲಕ್ಷ ಹಣ ಖರ್ಚು ಮಾಡುವ ಬದಲು, ಈಗಲೇ ಎಚ್ಚೆತ್ತು ಇಡೀ ನ್ಯಾಯಾಲಯ ಆವರಣವನ್ನೂ ಔಷಧೀಕರಣ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಈಗಾಗಲೇ ರಾಜ್ಯ ಹೈಕೋರ್ಟ್ ಗಮನಕ್ಕೂ ತರಲಾಗಿದೆ. ಕೂಡಲೇ ಇಡೀ ಕೋರ್ಟ್ ಆವರಣವನ್ನು ಸ್ಯಾನಿಟೈಸ್ ಮಾಡದೇ ಇದ್ದರೆ ಸೋಮವಾರದಿಂದ ಎಲ್ಲಾ ವಕೀಲರು ಕಲಾಪದಿಂದ ಹೊರಗುಳಿಯುವ ಬಗ್ಗೆ ನಿರ್ಧಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಮೊದಲು ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಂಡಿತ್ತು. ಆದರೀಗ ಮಕ್ಕಳೂ, ಮಹಿಳೆಯರೂ ಸೇರಿದಂತೆ ವ್ಯಾಪಾರಿಗಳು, ದೇಶ ಕಾಯುವ ಸೈನಿಕರಲ್ಲೂ ಕಾಣಿಸಿಕೊಳ್ಳುತ್ತಿರುವುದು ಭಯ ಹೆಚ್ಚಾಗಿದೆ. ಹೀಗಾಗಿ ಜನರು ಜಾಗೃತಿಗೊಳ್ಳುವುದು ಒಂದೆಡೆಯಾದರೆ ಜಿಲ್ಲಾಡಳಿತ ಮತ್ತು ಸರ್ಕಾರವೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Post a Comment

Previous Post Next Post