ಹಾಸನ: ಪಠ್ಯಪುಸ್ತಕಗಳನ್ನು ಕನ್ನಡಿಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಏಕೀಕರಣವಾಗಿ 75 ವರ್ಷಗಳೇ ಕಳೆಯುತ್ತಾ ಬಂದರೂ ರಾಜ್ಯದ ಇತಿಹಾಸ ಪಠ್ಯಪುಸ್ತಕಗಳು ಕನ್ನಡಿಕರಣವಾಗಿರುವುದಿಲ್ಲ. ಸರಕಾರವು ನಾಡ ದ್ರೋಹ ಪಠ್ಯಪುಸ್ತಕಗಳ ರಚನೆ ಮಾಡಿ ಕರ್ನಾಟಕದ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅಧಿಕಾರಕ್ಕೆ ಬರುವ ಸರ್ಕಾರಗಳು ನಿಮಗೆ ಬೇಕಾದ ಹಾಗೆ ಪಠ್ಯಪುಸ್ತಕಗಳ ಬದಲಾವಣೆ ಮಾಡಿಕೊಂಡು ಅವರ ಪಕ್ಷದ ಸಿದ್ಧಾಂತ ಒಪ್ಪುವ ವ್ಯಕ್ತಿಗಳ ಹೆಸರು ಪಠ್ಯಪುಸ್ತಕಗಳಲ್ಲಿ ಸೇರಿಸುವ ವ್ಯವಸ್ಥಿತ ಕೆಲಸ ಎಲ್ಲಾ ಕಾಲದಿಂದಲೂ ನಡೆಯುತ್ತಾ ಬಂದಿದೆ ಎಂದು ದೂರಿದರು. 8 ನೇ ತರಗತಿ ಇತಿಹಾಸ ಪುಸ್ತಕದಲ್ಲಿ ಮಹಾರಾಷ್ಟ್ರ ರಾಜ್ಯದ ಉದಯ ಎನ್ನುವ ಹೆಸರು ಪಠ್ಯವಾಗಿದೆ. ಆದರೇ ಕರ್ನಾಟಕ ಮಕ್ಕಳಿಗೆ ಕರ್ನಾಟಕ ರಾಜ್ಯದ ಉದಯದ ಇತಿಹಾಸವೇ ತಿಳಿದಿಲ್ಲ. ಮಹಾರಾಷ್ಟ್ರ ರಾಜ್ಯದ ಉದಯ ಯಾವ ಪುರುಷಾರ್ಥಕ್ಕಾಗಿ ಓದಬೇಕು? ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು ರಾಜಕೀಯ ಪಕ್ಷಗಳ ಏಜೆಂಟ್ ರ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ರ್ದುದೈವಿ ಎಂದು ಆಕ್ರೋಶವ್ಯಕ್ತಪಡಿಸಿದರು.
ಇನ್ನು ರಾಜ ಮನೆತನಗಳ ಇತಿಹಾಸ ನೋಡುವುದಾದರೆ ನಮ್ಮ ನಾಡಿನ ಮಕ್ಕಳಿಗೆ ನಮ್ಮ ನಾಡಿನ ರಾಜ ಮನೆತನಗಳ ಇತಿಹಾಸವೇ ಗೊತ್ತಿಲ್ಲ. ಅದು ಔರಂಗಜೇಬ್ ಮಹ್ಮದ ಘಜ್ವಿ ಘೋರಿ, ದೆಹಲಿ ಸುಲ್ತಾನರು, ಮರಾಠರು, ಮೊಘಲರು ಇತಿಹಾಸವೇ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಬೋಧಿಸಿ, ಸಂಗೊಳ್ಳಿ ರಾಯಣ್ಣನ ಇತಿಹಾಸ ಕೇಳಿದರೆ ಚಿತ್ರನಟ ದರ್ಶನ್ ಹೆಸರು ಹೇಳುತ್ತಾರೆ. ಕೆಂಪೇಗೌಡರ ಇತಿಹಾಸ ಕೇಳಿದರೇ ಸುದೀಪ್ ಹೆಸರು ಹೇಳುತ್ತಾರೆ. ಮಯೋರನ ಹೆಸರು ಹೇಳಿದರೇ ಡಾ|| ರಾಜಕುಮಾರ್ ಹೆಸರು ಹೇಳುತ್ತಿರುವ ಮಟ್ಟಿಗೆ ಕರ್ನಾಟಕ ಬಂದಿಎ. ಇನ್ನು ಕರ್ನಾಟಕವನ್ನು ಕಟ್ಟಿ ಆಳಿದ ರಾಜರುಗಳ ಹೆಸರುಗಳು ಗೊತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಇಡಿ ಭಾರತದಲ್ಲಿ ಮೊದಲು ಧ್ವನಿ ಎತ್ತಿದ್ದು ನಮ್ಮ ಕರ್ನಾಟಕದ ಹಲಗಲಿ ಬೇಡರು, ಕಿತ್ತೂರು ರಾಣಿ ಚೆನ್ನಮ್ಮ ಸೂರುಪುರದ ರಾಜ ವೆಂಕಟಪ್ಪ ನಾಯಕ, ನರಗುಂದದ ಬಾಬಾ ಸಾಹೇಬರ ಇತಿಹಾಸವೇ ಇಂದು ನಮಗೆ, ಮಕ್ಕಳಿಗೆ ಮರಚಿಕೆಯಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟ ಎಂದ ತಕ್ಷಣ ನಿಮ್ಮ ಮಕ್ಕಳ ಕತ್ತು ಉತ್ತರ ಭಾರತ ಕಡೆಗೆ ತಿರುಗುವಷ್ಟರ ಮಟ್ಟಿಗೆ ನಾವು ನಮ್ಮ ತನವನ್ನು ಕಳೆದುಕೊಂಡಿದ್ದೇವೆ.
ಕಾಂಗ್ರೆಸ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಅವರವರ ಪಕ್ಷದ ನಿಟ್ಟಿನಲ್ಲಿ ಮಾಡುವುದಾದರೆ ರಾಜ್ಯದ ಪಠ್ಯಪುಸ್ತಕಗಳು ಕನ್ನಡಿಕರಣ ಮಾಡುವವರು ಯಾರು? ನಮಗೆ ಹೇಡಿಗಳ ಮತ್ತು ನಮ್ಮ ರಾಜ್ಯವನ್ನು ದೋಚಿರುವ ಲೂಟಿಕೋರರ ಇತಿಹಾಸ ಬೇಕಿಲ್ಲ. ನಮ್ಮ ರಾಜ್ಯವನ್ನು ಕಟ್ಟಿದ ಗಂಡಸರ ಕಥೆಗಳು ನಮ್ಮ ಮಕ್ಕಳಿಗೆ ಬೇಕು ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ಕೂಡಲೇ ರಾಜ್ಯದ ಇತಿಹಾಸದ ಪಠ್ಯ ಪುಸ್ತಕಗಳ ಕನ್ನಡಿಕರಣಕ್ಕೆ ಮುಂದಾಗಬೇಕು. ಕೇಂದ್ರಿಯ ವಿದ್ಯಾಲಯಗಳ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಕರ್ನಾಟಕದ ಇತಿಹಾಸ ಸೇರಿಸುವ ಕೆಲಸ ತಕ್ಷಣವೇ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ, ಉಪಾಧ್ಯಕ್ಷ ಪಚ್ಚೇಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನು, ಸಂಜಯ್ ಗೌಡ ಹಾಗೂ ಬಾಲಚಂದ್ರ ಇತರರು ಪಾಲ್ಗೊಂಡಿದ್ದರು.
Tags
ಹಾಸನ