ಹಾಸನ:- ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಕಡಿಮೆ ಮಾಡಲು ನೂತನ ಪರಿಣಾಮಕಾರಿ ಚಿಕಿತ್ಸಾ ಮಾದರಿ ಅಳವಡಿಸಿಕೊಳ್ಳುವುದರ ಜೊತೆಗೆ ಸೌಕರ್ಯಗಳನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಇತರೆ ರಾಜ್ಯಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ನಮ್ಮ ರಾಜ್ಯದಲ್ಲಿಯೂ ಇದೇ ರೀತಿ ನಿರ್ವಹಣೆಯಾಗಬೇಕು. ಸೋಂಕಿತರನ್ನು ಆಸ್ಪತ್ರೆಗೆ ಕರೆತಂದ 48 ಗಂಟೆಯೊಳಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಸಂಪೂರ್ಣ ನಿಯಂತ್ರಿಸಲು ಹೆಚ್ಚು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ತುರ್ತು ನಿಗಾ ತಂಡದ ಮುಖ್ಯಸ್ಥರಾದ ಡಾ|| ತಿಲೋಕ್ ಚಂದ್ರ ಅವರು ಮಾತನಾಡಿ ಕೋವಿಡ್-19 ನೂತನ ಚಿಕಿತ್ಸಾ ನಿಯಮಾವಳಿಯಂತೆ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಮಾಡುವುದು ಅವಶ್ಯಕವಾಗಿದ್ದು, ಎಲ್ಲಾ ಜಿಲ್ಲೆಯಲ್ಲಿಯೂ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಪ್ಲಾಸ್ಮಾ ಹೆಚ್ಚು ಅವಶ್ಯಕತೆ ಇರುವುದರಿಂದ ಮೊಬೈಲ್ ರಕ್ತ ನಿಧಿ ಪ್ರಾರಂಭಿಸಿ ಜನರ ಮನೆ ಬಾಗಿಲಿಗೇ ಹೋಗಿ ರಕ್ತ ಸಂಗ್ರಹಿಸುವ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಅವರು ತಿಳಿಸಿದರು.
ಯಾವುದೇ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಉಪಕರಣಗಳು ಹಾಗೂ ಔಷಧಿಗಳ ಕೊರತೆಯಿದ್ದಲ್ಲಿ ಕೂಡಲೇ ಮನವಿ ಸಲ್ಲಿಸುವಂತೆ ತಿಳಿಸಿದರಲ್ಲದೆ, ತುರ್ತು ನಿಗಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಸೂಕ್ತ ತರಬೇತಿ ಪಡೆದಿರುವಂತೆ ಕ್ರಮ ವಹಿಸಿ ಎಂದ ಡಾ|| ತಿಲೋಕ್ ಚಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಉಲ್ಬಣವಾಗುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಕೇವಲ 50 ಹಾಸಿಗೆಯ ವ್ಯವಸ್ಥೆ ಇದ್ದು, ಅವುಗಳಲ್ಲಿ 40 ರಲ್ಲಿ ಮಾತ್ರ ವೆಂಟಿಲೇಟರ್ ಸೌಲಭ್ಯವಿದೆ. ಹಾಗಾಗಿ ಶೀಘ್ರವಾಗಿ ಹಾಸಿಗೆ ಹಾಗೂ ವೆಂಟಿಲೇಟರ್‍ಗಳ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ|| ತಿಲೋಕ್ ಚಂದ್ರ ಅವರು ಉಪಕರಣಗಳ ಪೂರೈಕೆಗೆ ಪ್ರಸ್ತಾಪ ಸಲ್ಲಿಸುವಂತೆ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಯವರು ಮಾತನಾಡಿ ಡಾ|| ತಿಲೋಕ್ ಚಂದ್ರ ಅವರ ನಿರ್ದೇಶನದಂತೆ ತುರ್ತು ನಿಗಾ ಘಟಕಕ್ಕೆ ನುರಿತ ತರಬೇತಿ ಪಡೆದಿರುವ ಸಿಬ್ಬಂದಿಗಳನ್ನು ನೇಮಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ