ಖಾಸಗಿ ಆಸ್ಪತ್ರೆಗಳಲ್ಲಿ ಶೆ.50 ರಷ್ಟು ಬೆಡ್ ಕಾಯ್ದಿರಿಸಿ: ಟಿ.ಎಂ. ವಿಜಯ್ ಭಾಸ್ಕರ್

ಕೋವಿಡ್-19 ಉಲ್ಬಣವಾಗುತ್ತಿರುವುದರಿಂದ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 50 ರಷ್ಟು ಬೆಡ್‍ಗಳನ್ನು ಕಾಯ್ದಿರಿಸಿಳಿದಕ್ಕೆ ಒಪ್ಪದ ಆಸ್ಪತ್ರೆಗಳನ್ನು ಪರವಾನಗಿ ರದ್ದುಗೊಳಿಸಿ ಕೆ.ಪಿ.ಎಮ್.ಇ. ನಿಯಮಗಳಡಿ ಕ್ರಮ ಜರುಗಿಸಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಸೂಚನೆ ನೀಡಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಹೊರ ರಾಜ್ಯದಿಂದ ಹಾಗೂ ನಗರ ಪ್ರದೇಶಗಳಿಂದ ಬರುವವರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೋವಿಡ್ ಆಸ್ಪತ್ರೆಯಲ್ಲಿನ ಬೆಡ್‍ಗಳು ಹಾಗೂ ಆಮ್ಲಜನಕ ಸಂಪರ್ಕಗಳನ್ನು ಹೆಚ್ಚಿಸಿ ಇತರೆ ವೈದ್ಯಕೀಯ ಸಾಮಗ್ರಿ ಸಾಧನಗಳನ್ನು ದಾಸ್ತಾನು ಮಾಡಿ ಎಂದು ತಿಳಿಸಿದರು.
ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಹಾಗೂ ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ವಿಶೇಷ ವಾರ್ಡ್‍ಗಳನ್ನು ಕಾಯ್ದಿರಿಸುವಂತೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರು ಹೇಳಿದರು.
ಖಾಲಿ ಇರುವ ವೈದ್ಯಾಧಿಕಾರಿ, ಪ್ರಯೋಗಾಲಯ ತಂತ್ರಜ್ಞ, ನರ್ಸ್ ಹಾಗೂ ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತುರ್ತಾಗಿ ಭರ್ತಿ ಮಾಡಿಕೊಳ್ಳಿ ಹಾಗೂ ಪರೀಕ್ಷೆ ಬರೆದಿರುವ ವೈದ್ಯಾಧಿಕಾರಿಗಳು ಹಾಗೂ ನರ್ಸ್‍ಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಸೂಚನಾ ಪತ್ರ ನೀಡಿ ಕೋವಿಡ್-19 ಕೆಲಸಕ್ಕೆ ಬಳಸಿಕೊಳ್ಳುವಂತೆ ಟಿ.ಎಂ. ವಿಜಯ್ ಭಾಸ್ಕರ್ ಅವರು ಸೂಚಿಸಿದರು.
ಆಸ್ಪತ್ರೆಗಳಲ್ಲಿನ ಬೆಡ್‍ಗಳ ಹಾಗೂ ಪ್ಯಾರಮೆಡಿಕಲ್ ಸಿಬ್ಬಂಧಿಗಳ ಲಭ್ಯತೆ ಕುರಿತು ಗಮನಹರಿಸಿ ಹಾಗೂ 108 ಆಂಬ್ಯುಲೆನ್ಸ್ ವಾಹನಗಳು ಮತ್ತು ಶವ ಸಾಗಿಸುವ ವಾಹನಗಳ ಲಭ್ಯತೆ ಕೊರತೆ ಇದ್ದರೆ ಬಾಡಿಗೆ ತೆಗೆದುಕೊಳ್ಳಿ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಅವರು ನಿರ್ದೇಶಿಸಿದರು.
ರೋಗ ಲಕ್ಷಣಗಳಿಲ್ಲದ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಶೌಚಾಲಯ ಹಾಗೂ ಸೂಕ್ತ ವ್ಯವಸ್ಥೆಗಳಿದ್ದು ಹೋಂ ಐಸೋಲೇಷನ್‍ನಲ್ಲಿರಲು ಇಚ್ಚಿಸಿದರೆ ಅವಕಾಶ ನೀಡಿ ಅವರ ಚಲನವಲನಗಳನ್ನು ವೀಕ್ಷಿಸಲು ವೈದ್ಯಕೀಯ ಸಿಬ್ಬಂದಿ ನೇಮಿಸಿ ನಿಗಾವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಟಿ.ಎಂ. ವಿಜಯ್ ಭಾಸ್ಕರ್ ಅವರು ಸಲಹೆ ನೀಡಿದರು.
ಸೋಂಕಿತರನ್ನು ಆಸ್ಪತ್ರೆಗೆ ವರ್ಗಾಯಿಸಿದ ತಕ್ಷಣ ಸಂಪರ್ಕಿತರ ಸಮೀಕ್ಷೆ ಮಾಡಿ ಹಾಗೂ ಹೋಂ ಐಸೋಲೇಷನ್ ತಪಾಸಣೆ ಮಾಡಲು ಪ್ರಾಥಮಿಕ ಸಂಪರ್ಕಿತರನ್ನು ಸರ್ವೆ ಮಾಡಲು, ಕಂಟೈನ್ಮೆಂಟ್ ವಲಯಗಳ ಮೇಲೆ ನಿಗಾವಹಿಸಲು ಹಾಗೂ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿ ಸೇವೆ ಬಳಸಿಕೊಳ್ಳಿ ಹಾಗೂ ಎಲ್ಲರಿಗೂ ವೈದ್ಯಕೀಯ ಸಾಮಗ್ರಿಗಳನ್ನು ನೀಡಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಸೂಚಿಸಿದರು.
ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಟಿದ ನಂತರ ರೋಗ ಲಕ್ಷಣಗಳಿದ್ದು ನೆಗಿಟಿವ್ ಬಂದ ವ್ಯಕ್ತಿಗಳಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಮತ್ತು ಕುಟುಂಬದವರಿಗೆ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಡ್ಡಾಯವಾಗಿ ಮಾಡುವಂತೆ ಟಿ.ಎಂ. ವಿಜಯ್ ಭಾಸ್ಕರ್ ಅವರು ತಿಳಿಸಿದರು.
ಐ.ಎಲ್.ಐ ಹಾಗೂ ಸಾರಿ ಪ್ರಕರಣಗಳ ಸರ್ವೆಯಲ್ಲಿ ಸರ್ಕಾರ ನೀಡಿರುವ ನಿಗಧಿತ ಗುರಿಯನ್ನು ಸಾಧಿಸಿ ಹಾಗೂ ನಾಡಕಚೇರಿಗಳಲ್ಲಿ ರೈತರಿಗೆ ನೀಡಬೇಕಾದ ಪಹಣಿ ದೊರೆಯುವಂತೆ ವ್ಯವಸ್ಥೆ ಮಾಡಿ ಎಂದರಲ್ಲದೆ, ಸಾಮಾಜಿಕ ಭದ್ರತಾ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ಸಿಗುವಂತೆ ಕ್ರಮವಹಿಸಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
 ವೀಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಹೋಂ ಕ್ವಾರಂಟೈನ್ ಮಾಡಿರುವ ಸೋಂಕಿತರ ಮೇಲೆ ನಿಗಾವಹಿಸಬೇಕು ಹಾಗೂ ಪ್ರತಿದಿನ ವೀಕ್ಷಿಸಿ ವರದಿ ನೀಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ನೇಮಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಕೇರ್ ಕೇಂದ್ರದಲ್ಲಿರುವ ಸೋಂಕಿತರಿಗೆ ಕೋವಿಡ್-19 ಕುರತು ಬಯಪಡದಂತೆ ಆತ್ಮ ಸ್ಥೈರ್ಯ ತುಂಬುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೆ, ಹೋಂ ಕ್ವಾರಂಟೈನ್‍ನಲ್ಲಿರಲು ಇಚ್ಛಿಸಿದ ವ್ಯಕ್ತಿಗಳ ಮಾಹಿತಿ ಪಡೆದು ನಿಯಮಗಳನ್ನು ಉಲ್ಲಂಘಿಸಿದರೆ ಎಫ್.ಐ.ಆರ್. ದಾಖಲಿಸಿ ಹಾಗೂ ಸೋಂಕಿತರಿಂದ ಬರವಣಿಗೆ ದಾಖಲೆ ಪಡೆಯಿರಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಂ, ಉಪ ವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್ ಮತ್ತು ಗಿರೀಶ್ ನಂದನ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಹಾಗೂ ಮತ್ತಿತರ ಅಧಿಕಾರಿಗಳು  ಹಾಜರಿದ್ದರು.

Post a Comment

Previous Post Next Post