ಚಿಕ್ಕಮಗಳೂರು: ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯದ ಪ್ರವಾಸಿ ತಾಣಗಳಿಗೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಮುಂದಿನ ಮೂರು ವರ್ಷದೊಳಗೆ ದೇಶದಲ್ಲೇ ಕರ್ನಾಟಕ ಪ್ರವಾಸೋದ್ಯಮವನ್ನು ಮೊದಲ ಮೂರು ಸ್ಥಾನದೊಳಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾಗಿ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಕುರಿತಂತೆ ಹೆಜ್ಜೆಗುರುತು ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಸಚಿವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
೨೦೨೦-೨೫ರ ಪ್ರವಾಸೋದ್ಯಮ ನೀತಿಯೂ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಸ್ಥಳೀಯರಿಗೆ ಉದ್ಯೋಗ, ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿ, ಮೂಲಭೂತಸೌಕರ್ಯಗಳಿಗೆ ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಚಿವನಾಗಿ ಅಧಿಕಾರ ಸ್ವೀಕರಿಸಿದ ೮೩ ದಿನಗಳಲ್ಲಿಯೇ ರಾಜ್ಯದ ಎಲ್ಲಾ ೩೦ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಟಾನಗೊಳಿಸಲು ಸೂಚಿಸಿದ ಪರಿಣಾಮ ಇಂದು ನಮ್ಮ ಸಾಧನೆಗಳ ಪ್ರತಿಫಲನ ಗೋಚರವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳನ್ನು ಗುರುತಿಸಿ ಅವುಗಳನ್ನು ಸರ್ವರೀತಿಯಿಂದಲೂ ವಿಶ್ವ ಪ್ರವಾಸೋದ್ಯಮ ಗುಣಮಟ್ಟಕ್ಕೆ ಏರಿಸಲಾಗುವುದು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದು, ಇದಕ್ಕೆ ಪೂರಕವಾಗಿ ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಆಹಾರ ಪದ್ಧತಿಯನ್ನು ಹೊರ ಜಗತ್ತಿಗೆ ಪರಿಚಯಿಸಲಾಗುವುದು ಎಂದ ಅವರು ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ ಆಹಾರ ಪ್ರಿಯರನ್ನು ಸೆಳೆಯುವ ಮೂಲಕ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ. ಹೀಗೆ ಹಲವು ಬಗೆಯ ಪ್ರವಾಸೋದ್ಯಮ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆದಿದೆ ಇದಕ್ಕಾಗಿ ಹೊಸ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿಗೆ ಬರಲಿದೆ ಎಂದರು.
ಕರ್ನಾಟಕವು ಪ್ರವಾಸಿಗರ ಸ್ವರ್ಗವಾಗಿದ್ದು ವರ್ಷದಿಂದ ವಷಕ್ಕೆ ದೇಶಿ-ವಿದೇಶಿಯ ಪ್ರವಾಸಿಗರನ್ನು ಹೆಚ್ಚಾಗಿ ಆರ್ಕಷಿಸುತ್ತಿದೆ. ಕರ್ನಾಟಕದಲ್ಲಿ ಈವರೆಗೆ ೩೧೯ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಆ ಪೈಕಿ ಪ್ರಮುಖವಾಗಿರುವ ೨೦ ವಿಶ್ವ ವಿಖ್ಯಾತ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಲಾಗಿದ್ದು ಶೀಗ್ರದಲ್ಲೇ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿ ಕೋವಿಡ್‌ನಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನೆಲೆ ಉಂಟಾಗಿದ್ದು ಪ್ರವಾಸಿಒಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ೨೦೦೬ ರಲ್ಲಿ ಕರ್ನಾಟಕಕ್ಕೆ ೩೬.೭ ರಷ್ಟು ಮಿಲಿಯನ್ ದೇಶಿ ಪ್ರವಾಸಿಗರು ಆಗಮಿಸಿದ್ದರೆ ೨೦೧೮ ರಲ್ಲಿ ೨೧೫.೦೩ ಮಿಲಿಯನ್ನಷ್ಟು ಏರಿಕೆಯಾಗಿದೆ. ಪ್ರವಾಸಿ ತಾಣಗಳಲ್ಲಿರುವ ಆಹ್ಲಾದಕರ ಹವಮಾನ, ಕಾಸ್ಮೋಪಾಲಿಟಿನ್ ಸಂಸ್ಕೃತಿ, ಅತ್ಯುನ್ನತ ಆಡಳಿತ ಪ್ರಕ್ರಿಯೆ ಹೂಡಿಕೆಗಿರುವ ವಿಫುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಮ್ಮ ಮುಂದಿನ ಯೋಜನೆಗಳನ್ನು ತೆರೆದಿಟ್ಟರು.
ಕೋವಿಡ್-೧೯ ಪರಿಣಾಮ ಸ್ಥಗಿತಗೊಂಡಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಹಾಗೂ ಸ್ಥಳೀಯ ಪ್ರವಾಸಿ ತಾಣಗಳನ್ನು ದೇಸಿ ಪ್ರವಾಸಿಗರಿಗೆ ಪರಿಚಯಿಸುವ ಲವ್ ಯುವರ್ ಲೋಕಲ್ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ ಜೊತೆಗೆ ಕೋವಿಡ್ ಸಮಯದಲಲಿ ದೇಶವ್ಯಾಪಿ ಸಂಪೂರ್ಣ ನಿರ್ಬಂಧ ಹೇರಿದ್ದರಿಂದ ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಿಗೆ ಸಹಾಯ ಹಾಗೂ ಸಹಕಾರ ನೀಡಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್-೧೯ ಸಹಾಯ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಪ್ರವಾಸೋಧ್ಯಮ ಮಂತ್ರಾಲಯದ ಧನಸಹಾಯದಲ್ಲಿ ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಮುಖ ಪಾರಂಪರಿಕ ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರವಾಸಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ರಾಜ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಆಗಿ ಪ್ರಸ್ತುತಪಡಿಸುವ ಸಲುವಾಗಿ ಸುಮಾರು ೨೫ ದೇಶ ಹಾಗೂ ರಾಷ್ಟದ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು ೪೦೦ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದ ಬಹುಸಂಸ್ಕೃತಿಯನ್ನು ಉಳಿಸುವ ಹಾಗೂ ಅದನ್ನು ವಿವಿಧ ಆಯಾಮಗಳಲ್ಲಿ ದೇಶಿ-ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಅನುವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಆದಿವಾಸಿ ಮತ್ತು ಬಂಜಾರ ಸಂಸ್ಕೃತಿ ಹೆರಿಟೇಜ್ ನಿರ್ಮಾಣದ ಕಲ್ಪನೆಗೆ ಚಾಲನೆ ನೀಡಲಾಗಿದೆ. ಇದನು ಕಾರ್ಯರೂಪಕ್ಕೆ ತರಲು ಪ್ರಸಕ್ತ ಸಾಲಿನಲ್ಲಿ ೧೫.೦೦ ಕೋಟಿ ರೂ ಅನುದಾನವನ್ನು ಮೀಸಲಿರಿಸಲಾಗಿದೆ, ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಕೃಷಿ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ಅಗ್ರಿ ಟೂರಿಸಂ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.
Tags
ಚಿಕ್ಕಮಗಳೂರು