ಹಾಸನ,ಆ.3(ಕರ್ನಾಟಕ ವಾರ್ತೆ):- ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟುವ ಮೂಲಕ ಡೆಂಗ್ಯೂ ನಿಯಂತ್ರಣ ಮಾಡಿ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿಂದು ರಾಷ್ಟ್ರೀಯ ಡೆಂಗ್ಯೂ ವಿರೋಧ ಮಾಸಾಚರಣೆ ಮತ್ತು ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆನಡೆಸಿ ಮಾತನಾಡಿದ ಅವರು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಇತರೆ ಖಾಯಿಲೆಗಳನ್ನು ನಿರ್ಲಕ್ಷ್ಯ ಮಾಡದೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ರೋಗವನ್ನು ಸಹ ಹತೋಟಿಗೆ ತರಬೇಕೆಂದು ಅವರು ಹೇಳಿದರು.
ವಾಹನಗಳ ಅನುಪಯುಕ್ತ ಟೈರ್‍ಗಳಲ್ಲಿ, ಎಳೆನೀರಿನ ಕರಟಗಳಲ್ಲಿ ಮಳೆನೀರು ಬಿದ್ದು ಶೇಖರಣೆಯಾಗುವುದನ್ನು ತಪ್ಪಿಸಲು ಅವುಗಳ ಸೂಕ್ತ ವಿಲೆವಾರಿಯಾಗಬೇಕು. ನೀರನ್ನು ಸಂಗ್ರಹ ಮಾಡುವ ಸಾಧನಗಳನ್ನು ಶುಚಿಯಾಗಿಡುವ ಮೂಲಕ ಡೆಂಗ್ಯೂ ಖಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕೆಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರು ಸೂಚಿಸಿದರು.
ಜು.22ರ ವರೆಗಿನ ಅಂಕಿ-ಅಂಶದನ್ವಯ ಜಿಲ್ಲೆಯಲ್ಲಿ 57 ಡೆಂಗ್ಯೂ ಜ್ವರ ಪೀಡಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಹಾಸನ ನಗರದಲ್ಲಿನ 17 ಬಡಾವಣೆಗಳಿಂದಲೇ ಶೇ 11 ರಷ್ಟು ಪ್ರಕರಣಗಳಿವೆ ಹಾಗಾಗಿ ಜನರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಸೂಚನೆ ಹಾಗೂ ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಡೆಂಗ್ಯೂ ರೋಗವು ಶೇಖರಿಸಲ್ಪಟ್ಟ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿದ್ದು, ಜನರಲ್ಲಿ ನೀರು ಶೇಖರಣೆ ಮತ್ತು ನಿರ್ವಹಣೆ ಹಾಗೂ ವಿಲೇವಾರಿ ತಿಳುವಳಿಕೆ ನೀಡಬೇಕು. ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರಚಾರ, ನಗರಸಭೆ, ಪುರಸಭೆ ಹಾಗೂ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಕರಪತ್ರಗಳನ್ನು ಹಂಚಿ ಡೆಂಗ್ಯೂ ಖಾಯಿಲೆ ಕುರಿತು ನಿರಂತರವಾಗಿ ಅರಿವು ಮೂಡಿಸಬೇಕೆಂದು ಚಂದ್ರಶೇಖರ್ ಅವರು ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ತಮ್ಮ ವಾಸಸ್ಥಳ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನಿಗಾವಹಿಸುವುದು, ಮನೆಗಳಲ್ಲಿ ನೀರು ಶೇಖರಣೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮತ್ತು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸಮುದಾಯ ಪಾಲ್ಗೋಳುವಿಕೆಯಾಗಬೇಕು ಆಗ ಡೆಂಗ್ಯೂವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ|| ಹಿರಣ್ಣಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರಕಾಶ್, ಹಿಮ್ಸ್ ನ ಸಮುದಾಯ ಔಷಧ ವಿಭಾಗದ ಮುಖ್ಯಸ್ಥರಾದ ವೆಂಕಟೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ|| ವೀಣಾ, ಜಿಲ್ಲಾ ಕೈಗಾರಿಕಾ ಅಧಿಕಾರಿ ರಾಮಕೃಷ್ಣ, ಮೀನುಗಾರಿಕೆ ಇಲಾಖಾಧಿಕಾರಿ ಹಾಜರಿದ್ದರು.
Tags
ಹಾಸನ